ಬೆಂಗಳೂರು: ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ ಗುರುವಾರ ಸಮನ್ಸ್ ನೀಡಿದ್ದು, ಶನಿವಾರ ಬೆಳಗ್ಗೆ 11 ಗಂಟೆಯೊಳಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚಿಸಿದೆ.
ಆದರೆ ಇದೇ ವೇಳೆ ಎಸಿಬಿ ಗೆ ಮನವಿ ಮಾಡಿರುವ ಯಡಿಯೂರಪ್ಪ ಉತ್ತರಿಸಲು ಒಂದು ವಾರದ ಸಮಯಾವಕಾಶ ನೀಡುವಂತೆ ಕೋರಿದ್ದಾರೆ. ದಾಖಲಾತಿಗಳನ್ನು ಸಂಗ್ರಹಿಸಲು ಸಮಯದ ಅವಶ್ಯಕತೆಯಿದೆ, ಆರ್ ಟಿ ಐ ಮೂಲಕ ದಾಖಲಾತಿ ಸಂಗ್ರಹಿಸಬೇಕಾಗಿದ್ದು, ಅದಕ್ಕಾಗಿ ಗಡುವು ನೀಡಬೇಕೆಂದು ಎಸಿಬಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನಲ್ಲಿ ಡಾ. ಶಿವರಾಮ ಕಾರಂತ ಲೇಔಟ್ ಗಾಗಿ ವಶಪಡಿಸಿಕೊಳ್ಳಲಾಗಿದ್ದ 257 ಎಕರೆಯಷ್ಟು ಭೂಮಿಯನ್ನು ಡಿನೋಟಿಫೈ ಮಾಡಲು 2009-12 ರ ಅವಧಿಯಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪ ಆದೇಶ ಹೊರಡಿಸಿದ್ದರು ಎಂದು ಎಸಿಬಿ ಅಧಿಕಾರಿಗಳು ಆಗಸ್ಟ್ 10 ರಂದು ಎಫ್ಐಆರ್ ದಾಖಲಿಸಿದ್ದರು.