ಬೆಂಗಳೂರು: ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಅವಘಡದಿಂದಾಗಿ 15 ವರ್ಷದ ಬಾಲಕನೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿ, ನಾಲ್ವರಿಗೆ ಗಾಯವಾಗಿರುವ ಘಟನೆ ನಗರ ಜೆ.ಸಿ. ನಗರ ಕುರುಬರಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ವೆಂಕಟೇಶ್ (15) ಸಾವನ್ನಪ್ಪಿದ ಬಾಲಕನಾಗಿದ್ದಾನೆ. ಮಹಾಲಕ್ಷ್ಮಿ ಲೇ ಔಟ್ ಬಳಿಯಿರುವ ಕುರುಬರಹಳ್ಳಿಯಲ್ಲಿ ನಿನ್ನೆ ರಾತ್ರಿ ಗಣೇಶ ಚತುರ್ಥಿಯ ಮೂರನೇ ದಿನ ಮೂರ್ತಿ ವಿಸರ್ಜನೆ ಮಾಡಲು ಟೆಂಪೋವೊಂದು ಹೋಗುತ್ತಿತ್ತು. ಈ ವೇಳೆ ವಾಹನ ನಿಯಂತ್ರಣ ತಪ್ಪಿ ಬಾಲಕ ವೆಂಕಟೇಶ್ ಮೇಲೆ ಹರಿದಿದೆ. ಬಳಿಕ ಸ್ಥಳದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಜನರ ಮೇಲೂ ಹೋಗಿದೆ. ಈ ವೇಳೆ ನಾಲ್ವರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿನ್ನೆ ರಾತ್ರಿ 11.30ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. 100 ಕೆಜಿ ತೂಕದ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ವಾಹನವೊಂದು ಲಗ್ಗೆರೆಗೆ ಹೊರಟಿತ್ತು. ಈ ವೇಳೆ ಚಾಲಕ ಪ್ರದೀಪ್ ವಾಹನದ ಮೇಲಿದ್ದ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ಬಳಿಕ ವಾಹನ ಸ್ಥಳದಲ್ಲಿ ನೃತ್ಯ ಮಾಡುತ್ತಿದ್ದ ಯುವಕನ ಮೇಲೆ ಹರಿದಿದೆ. ಈವೇಳೆ ಬಾಲಕ ವೆಂಕಟೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿ ಕೆಲ ಯುವಕರಿಗೂ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಗಣೇಶನ ಮೂರ್ತಿ 100 ಕೆಜಿ ತೂಕಕ್ಕೂ ಹೆಚ್ಚಾಗಿತ್ತು. ರಸ್ತೆಯಲ್ಲಿ ಜನ ಸಂದಣಿ ಹೆಚ್ಚಾಗಿತ್ತು. ಹೀಗಾಗಿ ಚಾಲಕ ವಾಹನದ ಮೇಲಿದ್ದ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ಚಾಲನೆ ವೇಳೆ ನಿರ್ಲಕ್ಷ್ಯ, ಮದ್ಯಪಾನ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣಕ್ಕೆ ಚಾಲಕ ಪ್ರದೀಪ್ ನನ್ನು ಬಂಧನಕ್ಕೊಳಪಡಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos