ಬೆಂಗಳೂರು: ಮುಂದಿನ ವರ್ಷ ಫೆಬ್ರವರಿಯಿಂದ ರಾಜ್ಯ ಸರ್ಕಾರ ಕಡಿಮೆ ಟ್ರಾಫಿಕ್ ದಿನ ಅಭಿಯಾನವನ್ನು ಆರಂಭಿಸಲಿದ್ದು, ನಗರದಲ್ಲಿ ವಾಯು ಹಾಗೂ ಶಬ್ದ ಮಾಲಿನ್ಯ ದಟ್ಟಣೆಯನ್ನು ಕಡಿಮೆ ಮಾಡಿ ಜನರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವಂತೆ ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ ಎಂದು ಸಾರಿಗೆ ಇಲಾಖೆ ಸಚಿವ ಹೆಚ್.ಎಂ.ರೇವಣ್ಣ ತಿಳಿಸಿದರು.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂದಿನ ಫೆಬ್ರವರಿಯಿಂದ ತಿಂಗಳ ಪ್ರತಿ ಎರಡನೇ ಭಾನುವಾರ ನಾಗರಿಕರು ಸ್ವಂತ ವಾಹನಗಳನ್ನು ಬಿಟ್ಟು ಸಾರ್ವಜನಿಕ ವಾಹನಗಳನ್ನು ಬಳಸಬೇಕೆಂದು ಹೇಳಿದರು. ಆದರೆ ಕ್ಯಾಬ್ ಗಳು, ಆಟೋರಿಕ್ಷಾಗಳು ಮತ್ತು ವಿದ್ಯುತ್ ಚಾಲಿತ ವಾಹನಗಳು ಈ ದಿನದಂದು ಸಂಚರಿಸಲು ಯಾವುದೇ ನಿರ್ಬಂಧವಿಲ್ಲ ಎಂದರು.
ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ಮಟ್ಟವನ್ನು ತಗ್ಗಿಸಲು ನಾವು ಕ್ರಮ ಕೈಗೊಳ್ಳಬೇಕಾಗಿದೆ. ನಗರದಲ್ಲಿ ಪ್ರತಿನಿತ್ಯ ಸುಮಾರು 72 ಲಕ್ಷ ವಾಹನಗಳು ಸಂಚರಿಸುತ್ತಿದ್ದು ಭವಿಷ್ಯದಲ್ಲಿ ದೆಹಲಿಯಂತಹ ಪರಿಸ್ಥಿತಿ ಎದುರಿಸಬೇಕಾಗಬಹುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ತಿಂಗಳಲ್ಲಿ ಕನಿಷ್ಠ ಒಂದು ದಿನವಾದರೂ ಜನರು ತಮ್ಮ ವಾಹನಗಳನ್ನು ರಸ್ತೆಗಿಳಿಸಿದಂತೆ ಸಚಿವರು ಮನವಿ ಮಾಡಿಕೊಂಡರು. ಕಡಿಮೆ ಸಂಚಾರ ದಟ್ಟಣೆ ದಿನ ಸುಮಾರು 65 ಲಕ್ಷ ವಾಹನಗಳು ರಸ್ತೆಗಿಳಿಯಲಿಕ್ಕಿಲ್ಲ ಎಂದು ಹೇಳಿದರು.