ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ವಿನ್ಸೆಂಟ್ ಮೆನೆಜೆಸ್
ಮಂಗಳೂರು: ಕ್ರಿಸ್ ಮಸ್ ಸಂದರ್ಭದಲ್ಲಿ ಸಂತಾ ಕ್ಲಾಸ್ ಬಂದು ತಮಗೆ ಉಡುಗೊರೆ, ಮಿಠಾಯಿಗಳನ್ನು ಕೊಡಬೇಕೆಂದು ಎಲ್ಲರೂ ಆಶಿಸುತ್ತಾರೆ. ಮಂಗಳೂರಿನಲ್ಲಿ ಕಳೆದ 18 ವರ್ಷಗಳಿಂದ ಸಂತನೊಬ್ಬ ಅನೇಕರ ಆಸೆಗಳನ್ನು ಈಡೇರಿಸುತ್ತಿದ್ದಾರೆ.
ತನ್ನ ಸ್ಕೂಟರ್ ನಲ್ಲಿ ಬಲೂನ್ ಮತ್ತು ಉಡುಗೊರೆಗಳನ್ನು ಹೊತ್ತು ತರುತ್ತಾರೆ. ಶಾಲೆ, ಮನೆ, ಆಸ್ಪತ್ರೆಯೆಂದು 400 ಕಿಲೋ ಮೀಟರ್ ನಷ್ಟು ಪ್ರತಿವರ್ಷ ತನ್ನ ಗಾಡಿಯಲ್ಲಿ ಸಾಗುತ್ತಾರೆ. ಮಿಠಾಯಿಗಳನ್ನು ಕೊಡುವುದು ಮಾತ್ರವಲ್ಲದೆ ಕ್ರಿಸ್ ಮಸ್ ನಲ್ಲಿ ಸಂದೇಶಗಳನ್ನು ಕೂಡ ಪಸರಿಸುತ್ತಾರೆ. ನಿಮ್ಮ ಶತ್ರುಗಳನ್ನು ಪ್ರೀತಿಸಿ ಮತ್ತು ಅವರನ್ನು ಕ್ಷಮಿಸಿ. ನಮ್ಮ ಜೀವನದಲ್ಲಿ ನಿಜವಾದ ಶತ್ರುಗಳಿಲ್ಲ ಎನ್ನುತ್ತಾರೆ ಬೆಳ್ತಂಗಡಿಯ ಕೊಕ್ಕಡದ ಸ್ಥಳೀಯ ಸಂತ ವಿನ್ಸೆಂಟ್ ಮೆನೆಜೆಸ್.
ಕ್ರಿಸ್ ಮಸ್ ಸಮಯದಲ್ಲಿ ವಿನ್ಸೆಂಟ್ ನಗರದ ಸುತ್ತೆಲ್ಲಾ ಸಂಚರಿಸಿ ದಾರಿಹೋಕರಿಗೆ ಶುಭಾಶಯ ತಿಳಿಸಿ ಭಿಕ್ಷುಕರಿಗೆ ಕೂಡ ಸೆಲ್ಯೂಟ್ ಹೇಳುತ್ತಾರೆ. ಬೆಜೈ ಸೇರಿದಂತೆ ಅನೇಕ ಕಡೆಗಳಲ್ಲಿ ಆಶ್ರಮಗಳಿಗೆ ಸಹ ಭೇಟಿ ಕೊಟ್ಟಿದ್ದೇನೆ. ಪ್ರತಿವರ್ಷ ಮಂಗಳೂರಿನಲ್ಲಿ ಎರಡು ದಿನಗಳನ್ನು ಕಳೆದು ನಂತರ ಪುತ್ತೂರು, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲ್ಲೂಕಿಗೆ ಹೋಗುತ್ತಾರೆ. ಈ ವರ್ಷ ಕೆಲವು ಶಾಲೆಗಳಲ್ಲಿ ಅವರನ್ನು ಕಾರ್ಯಕ್ರಮಗಳಿಗೆ ಕರೆದಿದ್ದಾರೆ ಎನ್ನುತ್ತಾರೆ ಅವರ ಪತ್ನಿ ಕ್ರಿಸ್ಟಿನ್. ತಮ್ಮ ಸ್ಕೂಟರ್ ನಲ್ಲಿಯೇ ಸಂಚರಿಸಿ ಶಾಲೆಗಳಿಗೆ ಮತ್ತು ಅನಾಥಾಶ್ರಮಗಳಿಗೆ ಹೋಗಿ ಚಾಕಲೇಟು, ಕೇಕನ್ನು ನೀಡುತ್ತಾರೆ. ವೆನ್ಲಾಕ್ ಆಸ್ಪತ್ರೆಯಲ್ಲಿರುವ ಮಕ್ಕಳನ್ನು ಕೂಡ ಭೇಟಿ ಮಾಡಿದ್ದಾರೆ.
ವಿನ್ಸೆಂಟ್ ಅವರ ಈ ಕಾರ್ಯಕ್ಕೆ ಪತ್ನಿ ಕೂಡ ಸಹಕಾರ ನೀಡುತ್ತಾರೆ. ನನ್ನ ಬಟ್ಟೆಗಳನ್ನು ಇಸ್ತ್ರಿ ಮಾಡಿ ಸಿದ್ದವಾಗಿಡುತ್ತಾಳೆ ನನ್ನ ಪತ್ನಿ. ಕ್ರಿಸ್ ಮಸ್ ಮುಗಿದ ನಂತರ ಅವಳೇ ನನ್ನ ಬಟ್ಟೆಗಳನ್ನು ಜೋಪಾನವಾಗಿಡುವುದು. ಅದನ್ನು ಮುಂದಿನ ವರ್ಷ ನಾನು ಹಾಕಿಕೊಳ್ಳುವುದಷ್ಟೇ ನನ್ನ ಕೆಲಸ. ಹೀಗೆ ಕಳೆದ 18 ವರ್ಷಗಳಿಂದ ಪ್ರತಿ ಕ್ರಿಸ್ ಮಸ್ ಗೆ ಸಂಚರಿಸುತ್ತೇನೆ. ಇಲ್ಲಿಯವರೆಗೆ ನನ್ನ ಖರ್ಚನ್ನು ನಾನೇ ನೋಡಿಕೊಳ್ಳುತ್ತಿದ್ದು ಈ ವರ್ಷ ಇಬ್ಬರು ಪ್ರಾಯೋಜಕರು ಸಿಕ್ಕಿದ್ದಾರೆ ಎನ್ನುತ್ತಾರೆ.
ಮೂಲತಃ ಕೃಷಿಕರಾಗಿರುವ ವಿನ್ಸೆಂಟ್ ಕ್ರಿಸ್ ಮಸ್ ಸಮಯದಲ್ಲಿ ಒಂದು ತಿಂಗಳನ್ನು ತಮ್ಮ ಈ ಕಾರ್ಯಕ್ಕೆ ಮೀಸಲಿಡುತ್ತಾರೆ.