ತುಮಕೂರು ಜಿಲ್ಲೆಯ ಶಿರಾ ಪುರಸಭೆ ಕಚೇರಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ನಂತರ ಆಹಾರ ಸವಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಚಿವ ಟಿ.ಬಿ.ಜಯಚಂದ್ರ ಕೂಡ ಹಾಜರಿದ್ದರು
ತುಮಕೂರು: ಅಗತ್ಯವಿರುವವರಿಗೆ ಅಗ್ಗದ ದರದಲ್ಲಿ ಆಹಾರ ಒದಗಿಸುವ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ನ್ನು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಉದ್ಘಾಟಿಸಿದರು.
ಕ್ಯಾಂಟೀನ್ ನ್ನು ಉದ್ಘಾಟಿಸಿದ ನಂತರ ಮುಖ್ಯಮಂತ್ರಿ ತಮ್ಮ ಸಹೋದ್ಯೋಗಿಗಳು ಮತ್ತು ಇತರ ಅತಿಥಿಗಳ ಜೊತೆ ಉಪ್ಪಿಟ್ಟು ಮತ್ತು ಕೇಸರಿಬಾತು ಸವಿದರು. ಕ್ಷೀರ ಎಂಬ ಸಿಹಿ ತಿನಿಸಿನಿಂದಾಗಿ ಈ ತಾಲೂಕಿಗೆ ಶಿರಾ ಎಂಬ ಹೆಸರು ಬಂತು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಹೇಳಿದಾಗ ಸಿಎಂ ತಲೆದೂಗಿ ಸಿಹಿತಿನಿಸನ್ನು ತಿಂದರು.
ಬೆಂಗಳೂರಿನಿಂದ ಹೊರಗೆ ರಾಜ್ಯದ ಬೇರೆ ಭಾಗಗಳಲ್ಲಿ ಇಂದಿರಾ ಕ್ಯಾಂಟೀನ್ ನ್ನು ತೆರೆಯುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರ ನಾಡಿದ್ದು ಜನವರಿ 1ರಂದು ಉದ್ಘಾಟಿಸಬೇಕಿತ್ತು. ಆದರೆ ತಮ್ಮ ನವ ಕರ್ನಾಟಕ ಯಾತ್ರೆಯ ಭಾಗವಾಗಿ ಶಿರಾಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ನಿನ್ನೆಯೇ ಕ್ಯಾಂಟೀನ್ ನ್ನು ಉದ್ಘಾಟಿಸಿದರು.
ಕ್ಯಾಂಟೀನ್ ನಲ್ಲಿ ವಿದ್ಯುತ್ ಸಂಪರ್ಕ ಮತ್ತು ಇನ್ನು ಕೆಲವು ಅಗತ್ಯ ಕೆಲಸಗಳು ಬಾಕಿ ಇರುವುದರಿಂದ ಸಾರ್ವಜನಿಕರಿಗೆ ಜನವರಿ ಮೊದಲ ವಾರದಿಂದ ಆಹಾರಗಳನ್ನು ಪೂರೈಕೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಶಿರಾ ಪುರಸಭೆ ಮಂಡಳಿ ಕಚೇರಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನ್ನು ತೆರೆಯಲಾಗಿದ್ದು ಇದು ಸರ್ಕಾರಿ ಆಸ್ಪತ್ರೆಯ ಎದುರು ಇದೆ. ಬೆಂಗಳೂರಿನಿಂದ ಹೊರಗೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಶಿರಾದಲ್ಲಿ ಇಂದಿರಾ ಕ್ಯಾಂಟೀನ್ ಶಿರಾದಲ್ಲಿ ಪ್ರಾರಂಭವಾಗಿದೆ.
ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯ ಎಲ್ಲಾ 198 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ನ್ನು ಆರಂಭಿಸಲು ರಾಜ್ಯ ಸರ್ಕಾರ ಯೋಜಿಸಿದ್ದು ಈಗಾಗಲೇ ಹಲವೆಡೆ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಿಂದ ಹೊರಗೆ ಜಿಲ್ಲಾ ಕೇಂದ್ರಗಳಲ್ಲಿ 171 ತಾಲ್ಲೂಕುಗಳಲ್ಲಿ 246 ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ.