ಬೆಂಗಳುರು: ಆಪ್ ಆಧಾರಿತ ಉಬರ್ ಮತ್ತು ಓಲಾ ಟ್ಯಾಕ್ಸಿ ಚಾಲಕರು ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಬಧವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಹಲವು ಪ್ರಯಾಣಿಕರನ್ನು ದಾರಿ ಮಧ್ಯದಲ್ಲೇ ಬಿಟ್ಟು ಕ್ಯಾಬ್ ಚಾಲಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಆರಂಭದಲ್ಲಿ ಕೆಲವೇ ಚಾಲಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಆದರೆ ಪ್ರತಿಭಟನೆಯಲ್ಲಿ ಭಾಗಿಯಾಗದ ಕ್ಯಾಬ್ ಗಳನ್ನು ತಡೆದು ಅವರೂ ಮುಷ್ಕರದಲ್ಲಿ ಭಾಗಿಯಾಗುವಂತೆ ಮಾಡಲಾಗಿದ್ದು, ಇದರಿಂದ ಹಲವು ಕ್ಯಾಬ್ ಪ್ರಯಾಣಿಕರು ದಾರಿ ಮಧ್ಯೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು.
ಕೆಲವು ಸ್ಥಳಗಳಲ್ಲಿ ನಾವು ಕ್ಯಾಬ್ ಸೇವೆಯನ್ನು ಸ್ಥಗಿತಗೊಳಿಸಿಲ್ಲ ಎಂದಿರುವ ಓಲಾ, ಟ್ಯಾಕ್ಸಿ ಫಾರ್ ಸೂರ್, ಮತ್ತು ಉಬರ್ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಅವರು, ಓಲಾ ಮತ್ತು ಉಬರ್ ಚಾಲಕರು ವೇತನ ಹಾಗೂ ಪ್ರೋತ್ಸಾಹ ಧನ ಹೆಚ್ಚಳಕ್ಕೆ ಆಗ್ರಹಿಸ ಮುಷ್ಕರ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಅವರ ಬೇಡಿಕೆ ಈಡೇರಿಸಲು ನಾವು ಮಂಗಳವಾರದವರೆಗೆ ಕಾಲವಕಾಶ ನೀಡಿದ್ದೇವು. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಪ್ ಆಧಾರಿತ ಸಂಸ್ಥೆಗಳು ಸುಳ್ಳು ಭರವಸೆ ನೀಡುತ್ತಿವೆ ಎಂದು ಆರೋಪಿಸಿದ್ದಾರೆ.
ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಶೇ.80ರಷ್ಟು ಕ್ಯಾಬ್ ಚಾಲಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಮಧ್ಯೆ ಆಕ್ರೋಶಿತ ಪ್ರತಿಭಟನಾನಿರತ ಕೆಲ ಚಾಲಕರು ಉಬರ್ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಚೇರಿಯ ಗಾಜು ಪುಡಿಪುಡಿಯಾಗಿದೆ.