ಮೈಸೂರು: ಶವ ಸಂಸ್ಕಾರ ಮಾಡಲು ಸ್ಮಶಾನವಿಲ್ಲದ ಕಾರಣ ಮೃತ ಪಟ್ಟಿದ್ದ 90 ವರ್ಷದ ವೃದ್ಧೆಯ ಮೃತ ದೇಹವನ್ನು 2 ದಿನಗಳ ಕಾಲ ಮನೆಯಲ್ಲಿಯೇ ಇಟ್ಟು ಕಾದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಗುಳಿಪುರ ಗ್ರಾಮದಲ್ಲಿ ನಡೆದಿದೆ.
ಬುಧವಾರ ಬೆಳಗ್ಗೆ ಸುಮಾರು 11 ಗಂಟೆಗೆ ರಂಗಮ್ಮ ನಿಧನರಾಗಿದ್ದಾರೆ. ಶವ ಸಂಸ್ಕಾರ ಮಾಡಲು ರಂಗಮ್ಮ ಸಂಬಂಧಿಕರು ಗುರುವಾರ ಸಂಜೆ ವರೆಗೂ ಭೂಮಿಗಾಗಿ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸ್ಥಳ ಸಿಗದ ಕಾರಣ ನೀರಾವರಿ ಕಾಲುವೆಯ ಪಕ್ಕದಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
310 ನಾಯಕ ಹಾಗೂ 270 ಲಿಂಗಾಯಿತ ಕುಟುಂಬಗಳಿರುವ ಗುಳಿಪುರ ಗ್ರಾಮದಲ್ಲಿ ಈ ಎರಡು ಸಮುದಾಯದವರಿಗೂ ಪ್ರತ್ಯೇಕ ಸ್ಮಶಾನ ಭೂಮಿಯಿದೆ. ಆದರೆ 65 ಕುಟುಂಬಗಳಿರುವ ದಲಿತರ ಅಂತ್ಯ ಸಂಸ್ಕಾರಕ್ಕೆ ಇಡೀ ಗ್ರಾಮದಲ್ಲಿ ಸ್ಮಶಾನ ಭೂಮಿಯಿಲ್ಲ, ದಲಿತರೆಲ್ಲಾ ಹಲವು ವರ್ಷಗಳಿಂದ ತಮ್ಮತಮ್ಮ ಜಮೀನಿನನಲ್ಲೇ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.
ಸರ್ಕಾರ ಐದು ಎಕರೆ ಖಾಸಗಿ ಭೂಮಿ ಖರೀದಿಸಿ ಅವುಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ದಲಿತರಿಗೆ ನೀಡಿದೆ. ಆದರೆ ಈ ಜಾಗದಲ್ಲಿ ದಲಿತರ ಅಂತ್ಯ ಸಂಸ್ಕಾರ ನಡೆಸಲು ನಾಯಕ ಸಮುದಾಯದವರು ತೀವ್ರ ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ, ಬೇರೆ ದಾರಿಯಿಲ್ಲದೇ ದಲಿತರು ನೀರಾವರಿಗಾಗಿ ಇರುವ ಕಾಲುವೆ ದಂಡೆಯಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಾರೆ.
ಸರ್ಕಾರ ಅಂತ್ಯ ಸಂಸ್ಕಾರ ಮಾಡಲು ನಮಗೆ ಭೂಮಿಯನ್ನು ನೀಡದ ಕಾರಣ ನಮ್ಮಲ್ಲಿ ಯಾರಾದರೂ ಮರಣ ಹೊಂದಿದಾಗ ನ ಭೂಮಿ ಸಿಗುವವರೆಗೂ ನಾವು ಶವವಿಟ್ಟಪು ಕಾಯುವ ಪರಿಸ್ಥಿತಿ ಎದುರಾಗಿದೆ ಎಂದು ದಲಿತ ಕಾಲೋನಿಯ ನಾಗರಾಜಯ್ಯ ಎಂಬುವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.