ಬಾಗಲಕೋಟೆ: ಬಾಗಲಕೋಟೆಯ ಕೂಡಲಸಂಗಮದಲ್ಲಿ ನಡೆಯುತ್ತಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಮಾತನಾಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
ಕೂಡಲ ಸಂಗಮದಲ್ಲಿ ನೆರೆದಿರುವ ಜನ ಸ್ಯಾಂಪಲ್, ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಆಹ್ವಾನಿಸುತ್ತೇವೆ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ರಾಯಣ್ಣ ಬ್ರಿಗೇಡ್ ನ್ನು ಶ್ರೀ ಕೃಷ್ಣನಿಗೆ ಹೋಲಿಕೆ ಮಾಡಿರುವ ಈಶ್ವರಪ್ಪ, ಶ್ರೀಕೃಷ್ಣ ಹುಟ್ಟುವುದಕ್ಕೆ ಮುನ್ನ ಕಂಸನಿಗೆ ನಡುಕ ಉಂಟಾಗಿತ್ತು. ಕೃಷ್ಣ ಹುಟ್ಟಿದ 6 ತಿಂಗಳ ನಂತರ ಕಂಸ ಸತ್ತ. ಕೃಷ್ಣನ ಬಾಯಲ್ಲಿ ವಿಶ್ವರೂಪ ಕಾಣಿಸಿತ್ತು. ಅದೇ ವಿಶ್ವರೂಪದ ಮಾದರಿಯಲ್ಲಿ ಜನ ಸೇರಿದ್ದೀರಿ ಎಂದು ನೆರೆದಿದ್ದ ಕಾರ್ಯಕರ್ತರಿಗೆ ಈಶ್ವರಪ್ಪ ಧನ್ಯವಾದ ಅರ್ಪಿಸಿದ್ದಾರೆ. ಶ್ರೀ ಕೃಷ್ಣ ಹುಟ್ಟಿದಾಗ ಕಂಸನಿಗೆ ನಡುಕ ಹುಟ್ಟಿದಂತೆ, ಬ್ರಿಗೇಡ್ ಹುಟ್ಟುತ್ತಿದ್ದಂತೆಯೇ ಏನೋ ಆಗುತ್ತಿದೆ ಎಂದು ಈಶ್ವರಪ್ಪ ಪರೋಕ್ಷವಾಗಿ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.