ಬೆಂಗಳೂರು: ಜಿಎಸ್ ಟಿ ಕಾಯ್ದೆ ಜಾರಿಯಾದ ಬೆನ್ನಲ್ಲೇ ಇತ್ತ ‘ನೈಸ್’ ಮತ್ತು ‘ಬಿಇಟಿಎಲ್’ ಕಂಪೆನಿಗಳು ಟೋಲ್ ದರವನ್ನು ಏರಿಕೆ ಮಾಡಿವೆ.
ಜುಲೈ 1ರಿಂದಲೇ ಅನ್ವಯವಾಗುವಂತೆ ಟೋಲ್ ದರಗಳನ್ನು ಏರಿಕೆ ಮಾಡಲಾಗಿದ್ದು, ನೈಸ್ ಆಡಳಿತ ಮಂಡಳಿ ನೈಸ್ ರಸ್ತೆಯ ಟೋಲ್ ದರಗಳನ್ನು ಶೇ10ರಿಂದ 15ರಷ್ಟು ಹೆಚ್ಚಿಸಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಕಂಪೆನಿಯು ರಾಜ್ಯ ಸರ್ಕಾರದೊಂದಿಗೆ ಮಾಡಿಕೊಂಡ ಟೋಲ್ ರಿಯಾಯಿತಿ ಒಪ್ಪಂದದಂತೆ ನಿರ್ವಹಣಾ ವೆಚ್ಚ ಸರಿದೂಗಿಸಲು ಪ್ರತಿವರ್ಷ ಶೇ 10ರಷ್ಟು ದರ ಹೆಚ್ಚಳ ಮಾಡಬಹುದು. ಆದರೂ ಕಂಪೆನಿ ನಾಲ್ಕು ವರ್ಷಗಳಿಂದ ದರ ಹೆಚ್ಚಿಸಿರಲಿಲ್ಲ. ಪರಿಷ್ಕೃತ ದರಗಳು ವಾಸ್ತವವಾಗಿ ಕಂಪೆನಿ ಮಾಡಿಕೊಂಡ ಒಪ್ಪಂದದಂತೆ ವಿಧಿಸಬೇಕಾದ ದರಕ್ಕಿಂತ ಕಡಿಮೆ ಇದ್ದು, ಅಂತರರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯಗಳ ನಿರ್ವಹಣಾ ವೆಚ್ಚ ಸರಿದೂಗಿಸಲು ದರ ಹೆಚ್ಚಳ ಅನಿವಾರ್ಯ ಎಂದು ಸಂಸ್ಥೆಗಳು ಹೇಳಿಕೊಂಡಿವೆ ಎಂದು ತಿಳಿದುಬಂದಿದೆ.
ದರ ಪರಿಷ್ಕರಣೆಯ ಬಳಿಕವೂ ಟೋಲ್ ದರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಎಲೆಕ್ಟ್ರಾನಿಕ್ ಸಿಟಿ ಎಕ್ಸ್‌ಪ್ರೆಸ್ ವೇ ದರಕ್ಕಿಂತ ಕಡಿಮೆ ಇದೆ ಎಂದೂ ಕಂಪೆನಿ ಹೇಳಿಕೊಂಡಿದೆ.
ಪತ್ರಿಕೆಯೊಂದರ ವರದಿಯಂತೆ ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆಯಲ್ಲಿ ಟೋಲ್ ಪ್ಲಾಜಾ ನಿರ್ವಹಿಸುವ ‘ಬೆಂಗಳೂರು ಟೋಲ್‌ವೇ ಪ್ರೈವೇಟ್ ಲಿಮಿಟೆಡ್’ (ಬಿಇಟಿಎಲ್) ಕೂಡ ಎಲ್ಲ ಮಾದರಿಯ ವಾಹನಗಳ ಟೋಲ್ ಶುಲ್ಕವನ್ನು ಪರಿಷ್ಕರಿಸಿದ್ದು, ದ್ವಿಚಕ್ರ ವಾಹನಗಳ ಶುಲ್ಕವನ್ನು ಪ್ರತಿ ಟ್ರಿಪ್‌ಗೆ ರು.15 ರಿಂದ 20ಕ್ಕೆ ಹೆಚ್ಚಿಸಲಾಗಿದೆ. ಕಾರುಗಳ ಶುಲ್ಕವನ್ನು ರು.65ರಿಂದ 70ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ದ್ವಿಚಕ್ರ ವಾಹನಗಳ ತಿಂಗಳ ಪಾಸ್ ದರ ರು. 515ರಿಂದ ರು.545 ಹಾಗೂ ಕಾರುಗಳ ದರ ರು.1,290ರಿಂದ ರು. 1,365ಕ್ಕೆ ಹೆಚ್ಚಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಎಚ್‌ಎಐ) ಅಧಿಕಾರಿ ವೈ.ವಿ. ಪ್ರಸಾದ್ ಅವರು, "2008ಕ್ಕೂ ಮೊದಲು ಮಂಜೂರಾತಿ ಪಡೆದ ಟೋಲ್ ಪ್ಲಾಜಾಗಳಲ್ಲಿ ಏಪ್ರಿಲ್ 1 ರಿಂದಲೇ ದರ ಪರಿಷ್ಕರಿಸಲಾಗಿದೆ. ಉಳಿದ ಟೋಲ್‌ಗಳಲ್ಲಿ ಅವು ಮಂಜೂರಾದ ದಿನಕ್ಕೆ ಅನುಗುಣವಾಗಿ ಜುಲೈ 1 ಮತ್ತು ಸೆಪ್ಟೆಂಬರ್ 1ರಿಂದ ಶುಲ್ಕ ಪರಿಷ್ಕರಿಸಲಾಗುತ್ತದೆ. ಬಿಇಟಿಎಲ್ ಸಂಸ್ಥೆ ಗುತ್ತಿಗೆ ವಹಿಸಿಕೊಂಡ ಟೋಲ್‌ಗಳಲ್ಲಿ ಜುಲೈ 1 ರಿಂದ ದರ ಪರಿಷ್ಕರಣೆ ಆಗಿದೆ. ನಿಯಮಗಳಲ್ಲೇ ದರ ಹೆಚ್ಚಳಕ್ಕೆ ಅವಕಾಶ ಇದ್ದು, ಎನ್‌ಎಚ್‌ಎಐ ಒಪ್ಪಿಗೆ ನೀಡಿದೆ ಎಂದು ಅವರು ಮಾಹಿತಿ ನೀಡಿದರು.