ಬೆಂಗಳೂರು: ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮೆಟ್ರೋ ಸಿಬ್ಬಂದಿ ನಡೆಸುತ್ತಿದ್ದ ಪ್ರತಿಭಟನೆ ಕೊನೆಗೂ ಅಂತ್ಯವಾಗಿದ್ದು, ನಮ್ಮ ಮೆಟ್ರೋ ರೈಲು ಸಂಚಾರ ಪುನಾರಂಭವಾಗಿದೆ ಎಂದು ತಿಳಿದುಬಂದಿದೆ.
ಮೆಟ್ರೋ ಸಿಬ್ಬಂದಿ ಹಾಗೂ ಮೆಟ್ರೋ ಭದ್ರತಾ ಸಿಬ್ಬಂದಿಗಳಿಬ್ಬರ ನಡುವಿನ ಜಗಳದಿಂದಾಗಿ ಮೆಟ್ರೋ ಸಿಬ್ಬಂದಿ ಬೆಳಗ್ಗೆ 5 ಗಂಟೆಯಿಂದಲೇ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದರು. ಹೀಗಾಗಿ ರೈಲು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿತ್ತು. ಇದೀಗ ಮೆಟ್ರೋ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಂಧಾನದಿಂದಾಗಿ ಸಿಬ್ಬಂದಿ ಪ್ರತಿಭಚನೆ ಕೈಬಿಟ್ಟಿದ್ದು, ಮೆಟ್ರೋ ಸಂಚಾರ ಪುನಾರಂಭಗೊಂಡಿದೆ.
ಸಂಧಾನಕಾರರಾದ ಹೇಮಂತ್ ನಿಂಬಾಳ್ಕರ್
ಏತನ್ಮಧ್ಯೆ ಮೆಟ್ರೋ ಸಿಬ್ಬಂದಿ ಹಾಗೂ ಮೆಟ್ರೋ ಭದ್ರತಾ ಸಿಬ್ಬಂದಿ ನಡುವಿನ ಜಗಳದಿಂದಾಗಿ ಏರ್ಪಟ್ಟಿದ್ದ ಪ್ರತಿಭಟನೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರು ಸಂಧಾನ ನಡೆಸಿದ್ದು, ಸಿಬ್ಬಂದಿಗಳ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಪ್ರತಿಭಟನಾಕಾರರು ಹಲವು ಬೇಡಿಕೆಗಳನ್ನು ಇಟ್ಟಿದ್ದು, ಈ ಪೈಕಿ ಪ್ರಸ್ತುತ ಬಂಧನಕ್ಕೀಡಾಗಿರುವ ಮೆಟ್ರೋ ಸಿಬ್ಬಂದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಿಂಬಾಳ್ಕರ್ ಅವರು, ಮೆಟ್ರೋ ಸಿಬ್ಬಂದಿ ನಮ್ಮ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಕಾನೂನಿನ ಪ್ರಕಾರ ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಸಂಘಟನೆ ರಚನೆಗೆ ಮುಂದಾದ ಸಿಬ್ಬಂದಿ
ಇನ್ನು ನಿನ್ನೆಯ ಘಟನೆ ಬಳಿಕ ಮೆಟ್ರೋ ಸಿಬ್ಬಂದಿ ತಮ್ಮದೆ ಸಂಘಟನೆ ರಚನೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದು, ಮುಂದೆ ಇಂತಹ ಘಟನೆಗಳು ನಡೆದರೆ ಸಿಬ್ಬಂದಿಗಳು ಒಗ್ಗೂಡುವುದಕ್ಕಾಗಿ ಸಂಘಟನೆ ರಚನೆ ಅಗತ್ಯ ಎಂದು ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ಇನ್ನು ನಿನ್ನೆ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಸುಮಾರು 20 ಮಂದಿ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದ್ದ ಹಲಸೂರು ಗೇಟ್ ಪೊಲೀಸರು, 6 ಮಂದಿಯ ವಿರುದ್ಧ ಎಫ್ ಐಆರ್ ದಾಖಲಿಸಲು ಮುಂದಾಗಿದ್ದರು. ಆದರೆ ಹೇಮಂತ್ ನಿಂಬಾಳ್ಕರ್, ಶಾಸಕ ಎನ್ ಎ ಹ್ಯಾರಿಸ್ ಮತ್ತು ಮೆಟ್ರೋ ಎಂಡಿ ಅವರ ಸಂಧಾನದ ಬಳಿಕ ತಪ್ಪು ಮಾಡಿದ ಇಬ್ಬರು ಸಿಬ್ಬಂದಿ ವಿರುದ್ಧ ಮಾತ್ರ ಎಫ್ ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.