ಬೆಂಗಳೂರು: ನಕಲಿ ದಾಖಲೆಗಳನ್ನು ನೀಡಿ ಕ್ರೆಡಿಟ್ ಕಾರ್ಡ್ ಪಡೆದು ಸುಮಾರು 50 ಲಕ್ಷ ರುಪಾಯಿ ವಂಚಿಸಿದ ಆರೋಪದ ಮೇಲೆ ಸೈಬರ್ ಕ್ರೈಂ ಪೊಲೀಸರು ಶುಕ್ರವಾರ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರು ನೀರನ್ ಜಯಪಾಲ್(37) ಹಾಗೂ ಅಬುಬಕರ್(39) ಎಂದು ಗುರುತಿಸಲಾಗಿದ್ದು, ಆರೋಪಿಗಳು ಕನಿಷ್ಠ ಮೂರು ಬ್ಯಾಂಕ್ ಗಳಿಗೆ ಮೋಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ನಕಲಿ ವೋಟರ್ ಐಡಿ ಕಾರ್ಡ್, ನಕಲಿ ಚಾಲನಾ ಪರವಾನಗಿ ಹಾಗೂ ಪ್ರತಿಷ್ಠಿತ ಕಂಪನಿಗಳ ಆಫರ್ ಲೇಟರ್ ಗಳನ್ನು ನೀಡಿ ಪಾನ್ ಕಾರ್ಡ್ ಪಡೆದು ಬಳಿಕ ಅದನ್ನು ಬ್ಯಾಂಕ್ ಗೆ ನೀಡಿ ಖಾತೆ ತೆರೆಯುತ್ತಿದ್ದರು. ನಂತರ ಕ್ರೆಡಿಟ್ ಕಾರ್ಡ್ ಪಡೆದು ಬ್ಯಾಂಕ್ ಗಳಿಗೆ ಲಕ್ಷಾಂತರ ರುಪಾಯಿ ವಂಚಿಸಿದ್ದಾರೆ.
ಕ್ರೆಡಿಟ್ ಕಾರ್ಡ್ ನಿಂದ ಚಿನ್ನ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ಖರೀದಿಸಿ ಬಳಿಕ ಅವುಗಳನ್ನು ಒಎಲ್ ಎಕ್ಸ್ ನಲ್ಲಿ ಕಡಿಮೆ ಬೆಲೆಗೆ ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಂದು ಕಾರು, ಒಂದು ಬೈಕ್ ಹಾಗೂ ಒಂದು ಲ್ಯಾಪ್ ಟಾಪ್ ಅನ್ನು ಜಪ್ತಿ ಮಾಡಲಾಗಿದೆ.