ಶರತ್ ಮಡಿವಾಳ ಶವಯಾತ್ರೆ ವೇಳೆ ನಡೆದ ಕಲ್ಲು ತೂರಾಟದ ನಂತರ ಬಂಟ್ವಾಳದಲ್ಲಿ ಬಿಗುವಿನ ವಾತಾವರಣದಲ್ಲಿ ಪೊಲೀಸರ ನಿಯೋಜನೆ
ಮಂಗಳೂರು: ಆರ್ ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಶವಯಾತ್ರೆಯ ಸಂದರ್ಭದಲ್ಲಿ ಕಲ್ಲು ತೂರಾಟ, ಹಿಂಸಾಚಾರ ನಡೆದ ನಂತರ ಇದೀಗ ಬಂಟ್ವಾಳ, ಬಿ.ಸಿ.ರೋಡ್ ಭಾಗಗಳಲ್ಲಿ ಸೂಕ್ಷ್ಮ ಶಾಂತ ಪರಿಸ್ಥಿತಿ ನೆಲೆ ಮಾಡಿದೆ. ನಿನ್ನೆ ಕೆಲ ಅಂಗಡಿ-ಮುಂಗಟ್ಟುಗಳು ತೆರೆದಿದ್ದವು. ಆದರೂ ಕೂಡ ಅತೀವ ಕಟ್ಟೆಚ್ಚರ ಇದೆ.
ಬಿ.ಸಿ.ರೋಡ್ ಮತ್ತು ಸುತ್ತಮುತ್ತಲ ಭಾಗಗಳಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆಂದು ನಿಯೋಜಿಸಲಾಗಿದೆ. ಬಿ.ಸಿ.ರೋಡ್ ಮಾರ್ಗವನ್ನು ಪ್ರವೇಶಿಸುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ಹಿಂಸಾಚಾರದಲ್ಲಿ ಶಂಕಿತ ಭಾಗಿದಾರರನ್ನು ಪೊಲೀಸ್ ಠಾಣೆಗೆ ಕರೆದು ವಿಚಾರಣೆ ನಡೆಸಲಾಗುತ್ತಿದೆ.
ಪಶ್ಚಿಮ ವಲಯದ ಜನರಲ್ ಪೊಲೀಸ್ ಇನ್ಸ್ ಪೆಕ್ಟರ್ ಪಿ.ಹರಿಶೇಖರನ್ ನಿನ್ನೆ ಕೆಲವು ಕಠಿಣ ನಿಲುವನ್ನು ತಳೆದಿದ್ದಾರೆ. ಪೊಲೀಸರ ಮೇಲೆ ಯಾರಾದರೂ ದಾಳಿ ಮಾಡಲು ಬಂದರೆ ಮತ್ತು ವಿಚಾರಣೆಗೆಂದು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ತಡೆದಾಗ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದರೆ ಅಂತವರ ಮೇಲೆ ಗುಂಡು ಹಾರಿಸುವಂತೆ ಆದೇಶ ನೀಡಿದ್ದಾರೆ.
ಕೋಮು ಸೂಕ್ಷ್ಮ ಸ್ಥಳಗಳಾದ ಮಂಗಳೂರು, ಕೈಕಂಬ, ಮೇಲ್ಕಾರ್, ಸಜಿಪ, ಮಾರ್ನಬೈಲು,ಮಾಣಿ, ಫರಂಗಿಪೇಟೆ, ಕಲ್ಲಡ್ಕ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚುವರಿ ಸಿಸಿಟಿವಿ ಕ್ಯಾಮರಾಗಳನ್ನು ನಿಯೋಜಿಸಲಾಗಿದೆ. ಕಲ್ಲಡ್ಕದಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸೂಪರಿಂಟೆಂಡ್ ಸಿ.ಎಚ್.ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಉದ್ರೇಕಕಾರಿ ಸಂದೇಶಗಳನ್ನು ಕಳುಹಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮೊನ್ನೆ ಶನಿವಾರ ಶವಯಾತ್ರೆ ವೇಳೆ ಕಲ್ಲು ತೂರಾಟ, ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರು 5 ಮಂದಿಯನ್ನು ಬಂಧಿಸಿದರೆ ನಿನ್ನೆ ಮತ್ತೆ 8 ಮಂದಿಯನ್ನು ಬಂಧಿಸಿದ್ದಾರೆ. ಹೀಗಾಗಿ ಬಂಧಿತರ ಸಂಖ್ಯೆ 13ಕ್ಕೇರಿದೆ.
ಶರತ್ ಕೊಲೆ ಪ್ರಕರಣದಲ್ಲಿ ಕಾಣದ ಪ್ರಗತಿ: ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆಯಾಗಿ 4 ದಿನಗಳು ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಕೊಲೆ ಪ್ರಕರಣದ ತನಿಖೆ ನಡೆಸಲು 6 ಮಂದಿ ಪೊಲೀಸರ ತಂಡವನ್ನು ರಚಿಸಲಾಗಿದೆ.