ರಾಜ್ಯ

ಅವ್ಯವಹಾರದ ಬಗ್ಗೆ ಡಿಐಜಿ ರೂಪಾಗೆ ಮಾಹಿತಿ : ಬೆಂಗಳೂರು ಜೈಲಿನಿಂದ 30 ಕೈದಿಗಳು ಶಿಫ್ಟ್

Shilpa D
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಶನಿವಾರ ಬಂದಿಖಾನೆ ಡಿಐಜಿ ರೂಪಾ ಭೇಟಿ ನಂತರ 30 ಕೈದಿಗಳನ್ನ ಭಾನುವಾರ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿದೆ.
ರಾಜ್ಯದ ವಿವಿಧ ಕಾರಾಗೃಹಗಳಿಗೆ ಪತ್ರ ಬರೆದಿರುವ ಪರಪ್ಪನ ಅಗ್ರಹಾರ ಕಾರಾಗೃಹ ಪ್ರಾಧಿಕಾರ, ಕೆಲವು ಕೈದಿಗಳನ್ನು ಅಲ್ಲಿನ ಜೈಲಿಗೆ ಸ್ಥಳಾಂತರಿಸುತ್ತಿದ್ದೇವೆ ಎಂದು ಬರೆದಿದ್ದು, ಯಾವ ಕಾರಣಕ್ಕೆ ಶಿಫ್ಟ್ ಮಾಡಲಾಗುತ್ತಿದೆ ಎಂಬ ಕಾರಣ ನೀಡಿಲ್ಲ.
ಬೆಂಗಳೂರು ಜೈಲಿನಿಂದ ಅನಂತಮೂರ್ತಿ, ಬಾಬು ಮತ್ತು ಬಾಬು ಅಲಿಯಾಸ್ ಲಾಂಗ್ ಬಾಬು ಎಂಬುವರನ್ನು ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ ಎಂದು ಬೆಳಗಾವಿ ಜೈಲಿನಿಂದ ವರದಿಯಾಗಿದೆ. ಜೈಲಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಡಿಐಜಿ ರೂಪಾ ಅವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮೂರು ಕೈದಿಗಳನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಮೂವರು ಕೈದಿಗಳನ್ನು ಪೊಲೀಸರ ಬಿಗಿ ಭದ್ರತೆಯಲ್ಲಿ  ಪೊಲೀಸ್ ವ್ಯಾನ್ ನಲ್ಲಿ ಕರೆತರಲಾಗಿದೆ.
ಬಳ್ಳಾರಿ ಕೇಂದ್ರ ಕಾರಾಗೃಹ, ವಿಜಯಪುರ ಸೆಂಟ್ರಲ್ ಜೈಲ್ ಗೆ  ಕೆಲ ಕೈದಿಗಳನ್ನು ಶಿಫ್ಟ್ ಮಾಡಲಾಗಿದೆ. ಸೈಯ್ಯದ್ ಕೈಸರ್, ವಸಂತ್ ಅರಸ್, ಮತ್ತು ಕೃಷ್ಮ ಎಂಬ ಮೂವರು ಕೈದಿಗಳನ್ನ ಬಿಗಿ ಭದ್ರತೆಯಲ್ಲಿ ಕಲಬುರಗಿ ಜೈಲಿಗೆ ತಂದು ಬಿಡಲಾಗಿದೆ.
ರೂಪಾ ಅವರಿಗೆ ಮಾಹಿತಿ ನೀಡಿದ್ದ ಕೈದಿಗಳಿಗೆ ಜೈಲು ಸೂಪರಿಂಡೆಂಟ್ ಕೃಷ್ಣ ಕುಮಾರ್ ಅವರ ಬೆಂಬಲಿಗ ಕೈದಿಗಳು ಥಳಿಸಿದ್ದಾರೆ ಎನ್ನಲಾಗಿದೆ, ಈ ಜಗಳ ಸ್ವಲ್ಪ ಜೋರಾದ ನಂತರ ಸ್ಥಳಕ್ಕೆ ಬಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು ಎಂದು ಹೇಳಲಾಗಿದೆ.  ಈ ವೇಳೆ ಬ್ಯಾರಕ್ ಗಳನ್ನು ಅಡ್ಡ ಹಿಡಿದ ಕೈದಿಗಳು ಪ್ರತಿಭಟನೆ ನಡೆಸಲು ಯತ್ನಿಸಿದರು ಎನ್ನಲಾಗಿದೆ.
ಇದಾದ ಕೆಲ ಗಂಟೆಗಳ ನಂತರ, ರಾಮಮೂರ್ತಿ, ಶ್ರೀನಿವಾಸ್, ಶಿವಶಂಕರ್, ಸೇರಿದಂತೆ ಹಲವು ಕೈದಿಗಳನ್ನು ಬೆಳಗಾವಿ, ಮೈಸೂರು, ಕಲಬುರಗಿ, ಬಳ್ಳಾರಿ ಮತ್ತು ವಿಜಯಪುರ ಜೈಲಿಗೆ ಸ್ಥಳಾಂತರಿಸಲಾಗಿದೆ. ಹಲ್ಲೆಗೊಳಗಾಗಿದ್ದ ಕೆಲ ಕೈದಿಗಳಿಗೆ ಪೊಲೀಸ್ ವ್ಯಾನ್ ನಿಂದ ಇಳಿಯಲಿ ಆಗಲಿಲ್ಲ, ಕೆಲ ಕೈದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು ಎಂದು ಮೂಲಗಳು ತಿಳಿಸಿವೆ. 
SCROLL FOR NEXT