ಪತಿ ಭೇಟಿಗಾಗಿ ಜೈಲಿನ ಬಳಿ ಕಾದು ಕುಳಿತಿರುವ ಅರುಣಾ ಹಾಗೂ ಆಕೆಯ ಸಹೋದರಿ ಪ್ರೇಮಾ
ಬೆಂಗಳೂರು: ಜೈಲಿನಲ್ಲಿ ನಾಲ್ಕು ದಿನಗಳಿಂದ ಗಲಾಟೆಗಳು ಹಾಗೂ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಕೈದಿಗಳನ್ನು ನೋಡಲು ಬಂದಿದ್ದ ಸಂಬಂಧಿಕರಿಗೆ ಭಾನುವಾರ ಅವಕಾಶ ನಿರಾಕರಿಸಲಾಗಿತ್ತು.
ಈ ನಡುವೆ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯೊಬ್ಬರ ತಂದೆಯ ಸಾವಿನ ಸುದ್ದಿ ತಿಳಿಸಲು ಪತ್ನಿ ಬಂದಿದ್ದರು. ಆದರೆ, ಕೈದಿಯ ಭೇಟಿಗೆ ಅವಕಾಶ ನೀಡದೆ ಕಾರಾಗೃಹ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆಂಬ ಆರೋಪಗಳು ಕೇಳಿ ಬರತೊಡಗಿವೆ.
ತುಮಕೂರು ಜಿಲ್ಲೆ ಬೆಳ್ಳಾವಿ ಗ್ರಾಮದ ರಾಜಣ್ಣ ಎಂಬುವವರು ಕೊಲೆ ಪ್ರಕರಣವೊಂದರಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರಾಜಣ್ಣ ಅವರ ತಂದೆ ಲಕ್ಷ್ಮೀ ನರಸಯ್ಯ (68) ಭಾನುವಾರ ಮೃತಪಟ್ಟಿದ್ದು, ಪತಿಗೆ ವಿಷಯ ತಿಳಿಸಲು ರಾಜಣ್ಣ ಅವರ ಪತ್ನಿ ಅರುಣಾ ತಮ್ಮ ಸಂಬಂಧಿಕರೊಂದಿಗೆ ಭಾನುವಾರ ಬೆಳಿಗ್ಗೆ ಕಾರಾಗೃಹದ ಬಳಿ ಬಂದಿದ್ದರು.
ಬೆಳಿಗ್ಗೆ 9.30ರ ಸುಮಾರಿಗೆ ತುಮಕೂರಿನಿಂದ ಅರುಣಾ ಅವರು ಸಂಬಂಧಿಕರೊಂದಿಗೆ ಜೈಲಿಗೆ ಬಂದಿದ್ದರು. ಜೈಲಿನ ಮುಖ್ಯದ್ವಾರದ ಬಳಿಯೇ ಹಲವು ಗಂಟೆಗಳು ಕಾದರೂ ರಾಜಣ್ಣ ಅವರನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ. ಅರುಣಾ ಅವರೊಂದಿಗೆ ಅಮಾನವೀಯವಾಗಿ ನಡೆದುಕೊಂಡಿರುವ ಜೈಲಿನ ಮಹಿಳಾ ಸಿಬ್ಬಂದಿಗಳು ಹಾಗೂ ಜೈಲಾಧಿಕಾರಿಗಳು ಜೈಲಿನ ಮುಖ್ಯದ್ವಾರದಿಂದ ಮುಖ್ಯರಸ್ತೆಯವರೆಗೂ ತಳ್ಳಿದ್ದಾರೆ. ತನ್ನ ಮಾವ ಮೃತಪಟ್ಟಿದ್ದು, ಪತಿಗೆ ವಿಷಯ ತಿಳಿಸಬೇಕೆಂದು ಕಾರಾಗೃಹ ಸಿಬ್ಬಂದಿ ಬಳಿ ಎಷ್ಟು ಕೇಳಿಕೊಂಡರೂ ಭೇಟಿಗೆ ಅವಕಾಶ ನೀಡಿಲ್ಲ. ಇದಾದ ಬಳಿಕ ಜೈಲಿನ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲು ಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ನಂತರ ಕಣ್ಣೀರು ಹಾಕುತ್ತಾ ಸಂಬಂಧಿಕರೊಂದಿಗೆ ಅರುಣಾ ಅವರು ಹೊರಬಂದಿದ್ದಾರೆ.
ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಸಂಜೆ ವೇಳೆಗೆ ಅರುಣಾ ಅವರಿಗೆ ಪತಿ ರಾಜಣ್ಣನನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಜೈಲಿನಿಂದ ಕೈದಿಯನ್ನು ಕಳುಹಿಸಿಕೊಡಲು ನ್ಯಾಯಾಲಯದಿಂದ ಅನುಮತಿ ಬೇಕು. ನ್ಯಾಯಾಲಯದಿಂದ ಅನುಮತಿ ಪತ್ರ ತನ್ನಿ ಎಂದು ಹೇಳಿ ಕೈದಿಯ ಪತ್ನಿಯನ್ನು ಜೈಲು ಅಧಿಕಾರಿಗಳು ಮರಳಿ ಕಳುಹಿಸಿದ್ದಾರೆ. ಈ ಬಗ್ಗೆ ಜೈಲಿನ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನ ನಡೆಸಲಾಗಿತ್ತಾದರೂ, ಯಾವ ಅಧಿಕಾರಿಗಳು ಸಂಪರ್ಕಕ್ಕೆ ಸಿಗಲಿಲ್ಲ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ತಮಿಳುನಾಡಿನ ಪ್ರಭಾವಿ ರಾಜಕಾರಣಿ ಶಶಿಕಲಾ, ವಿ.ನಟರಾಜನ್ ಸೇರಿದಂತೆ ಕೆಲ ಗಣ್ಯ ಕೈದಿಗಳಿಗೆ ಹಣ ಪಡೆದು ವಿಶೇಷ ಸೌಲಭ್ಯ ಕಲ್ಪಿಸಿದ್ದಾರೆಂದು ಬಂದೀಖಾನೆ ಇಲಾಖೆ ಮುಖ್ಯಸ್ಥರ ವಿರುದ್ಧವೇ ಡಿಐಜಿ ರೂಪಾ ವರದಿ ಸಲ್ಲಿಸಿದ್ದರು. ರೂಪಾ ಅವರ ಈ ವರದಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಇದಾದ ಬಳಿಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ 2ನೇ ವರದಿ ಸಲ್ಲಿಸಿದ್ದರು.