ಬೆಂಗಳೂರು: ಅತ್ಯಂತ ಕಡಿಮೆ ಬೆಲೆಗೆ ಚಿನ್ನಾಭರಣ ಮತ್ತು ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ಸಾಫ್ಟ್ ವೇರ್ ಎಂಜಿನಿಯರ್ ನ್ನು ಮೋಸ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಮಹದೇವಪುರದ ನಿವಾಸಿ, ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಧನಿಕ್ ಲಾಲ್ ಯಾದವ್ ಕಳೆದ ತಿಂಗಳು 25ರಂದು ತಮ್ಮ ಪತ್ನಿ ಜೊತೆ ಕೆ.ಆರ್.ಪುರಂ ರೈಲು ನಿಲ್ದಾಣಕ್ಕೆ ಊರಿಗೆ ಹೋಗಲು ರೈಲು ಟಿಕೆಟ್ ಬುಕ್ ಮಾಡಲು ಹೋಗಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಅವರು ಕೌಂಟರ್ ನಲ್ಲಿ ಕಾಯುತ್ತಿದ್ದಾಗ ಇಬ್ಬರು ಅನಾಮಿಕ ವ್ಯಕ್ತಿಗಳು ಧನಿಕ್ ಹತ್ತಿರ ಬಂದು 400 ವರ್ಷಗಳಷ್ಟು ಹಳೆಯ ನಾಣ್ಯವಿದು. ನಮ್ಮಲ್ಲಿ ಇಂತಹ ಹಲವು ನಾಣ್ಯಗಳು ಮತ್ತು 7 ಕೆಜಿ ಚಿನ್ನಾಭರಣಗಳಿವೆ, ಕಡಿಮೆ ಬೆಲೆಗೆ ನೀಡುತ್ತೇವೆ ತೆಗೆದುಕೊಳ್ಳಿ ಎಂದು ದುಂಬಾಲು ಬಿದ್ದರು.
ತಮಿಳು ನಾಡಿನ ದೇವಸ್ಥಾನದ ಹತ್ತಿರ ಕೆಲಸ ಮಾಡುವಾಗ ಈ ಚಿನ್ನಾಭರಣ ಮತ್ತು ನಾಣ್ಯ ಸಿಕ್ಕಿದ್ದು ಅದನ್ನು ಅಗ್ಗದ ಬೆಲೆಗೆ ಮಾರಾಟ ಮಾಡುವುದಾಗಿ, ಹಣದ ಅಗತ್ಯ ತಮಗೆ ತುಂಬಾ ಇದೆ ಎಂದೆಲ್ಲ ಹೇಳಿ ನಂಬಿಸಿದರು.
ಅದಕ್ಕೆ ಧನಿಕ್ ಲಾಲ್ ಮುಂದೊಂದು ದಿನ ತಮ್ಮನ್ನು ಸಂಪರ್ಕಿಸಿ ಎಂದು ಮೊಬೈಲ್ ಸಂಖ್ಯೆಯನ್ನು ಕೊಟ್ಟರು.ನಂತರ ಆರೋಪಿಗಳ ಕಾಟ ಆರಂಭವಾಯಿತು. ಪದೇ ಪದೇ ಫೋನ್ ಮಾಡಲು ಆರಂಭಿಸಿದರು. ಮೊನ್ನೆ 21ರಂದು ಆರೋಪಿಗಳು ಅಲಸೂರು ಹತ್ತಿರ ಧನಿಕ್ ಗೆ 5 ಲಕ್ಷ ರೂಪಾಯಿಗಳೊಂದಿಗೆ ಬರಲು ಹೇಳಿದರು. ಅದಕ್ಕೆ ಪ್ರತಿಯಾಗಿ 500 ಗ್ರಾಂ ಚಿನ್ನ ಕೊಡುತ್ತೇವೆ ಎಂದು ಹೇಳಿದರು. ಧನಿಕ್ ಮತ್ತು ಅವರ ಪತ್ನಿ ಬೆಳಗ್ಗೆ 11 ಗಂಟೆ ಸುಮಾರಿಗೆ 3 ಲಕ್ಷ ರೂಪಾಯಿ ನಗದಿನೊಂದಿಗೆ ಅವರು ಹೇಳಿದ ಸ್ಥಳಕ್ಕೆ ಹೋದರು. ಚಿನ್ನದ ನಿಖರತೆಯನ್ನು ಪರೀಕ್ಷಿಸಲೆಂದು ಚಿನ್ನಾಭರಣದ ಎರಡು ತುಂಡುಗಳನ್ನು ನೀಡಿದರು.
ಧನಿಕ್ ಅದನ್ನು ತೆಗೆದುಕೊಂಡು ಹೋಗಿ ಹತ್ತಿರದ ಚಿನ್ನದ ಅಂಗಡಿಗೆ ತೋರಿಸಿದಾಗ ಅದು ಚಿನ್ನ ಹೌದೆಂದು ಖಚಿತವಾಯಿತು. ಆಗ ಧನಿಕ್ ಮತ್ತುಆರೋಪಿಗಳ ನಡುವೆ ಮಾತುಕತೆಯಾಗಿ ಮೂರು ಲಕ್ಷಕ್ಕೆ ಒಪ್ಪಂದ ಏರ್ಪಟ್ಟಿತು. ಮೂರು ಲಕ್ಷ ರೂಪಾಯಿ ಕೊಟ್ಟು ಅರ್ಧ ಕೆಜಿ ಚಿನ್ನ ಕೊಂಡು ಅದೇ ಅಂಗಡಿಗೆ ಪರೀಕ್ಷಿಸಲೆಂದು ತೆಗೆದುಕೊಂಡು ಹೋದರು. ಆಗ ಪರೀಕ್ಷಿಸಿ ನೋಡಿದಾಗ ಅದು ಚಿನ್ನವೆಲ್ಲವೆಂದು ಗೊತ್ತಾಯಿತು. ಆರೋಪಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲೆತ್ನಿಸಿದಾಗ ಸಿಗಲಿಲ್ಲ. ತಾವು ಮೋಸ ಹೋಗಿದ್ದು ದಂಪತಿಗೆ ಗೊತ್ತಾಯಿತು.
ಭಾರತಿ ನಗರ ಪೊಲೀಸರಿಗೆ ದೂರು ನೀಡಿದ್ದು ಕೇಸು ದಾಖಲಿಸಿಕೊಂಡಿದ್ದಾರೆ. ದೂರಿನಲ್ಲಿ ಸುಮಾರು 55 ಮತ್ತು 40 ವರ್ಷ ವಯಸ್ಸಿನ ಇಬ್ಬರು ಪುರುಷರು ಹಾಗೂ ಸುಮಾರು 35 ವರ್ಷದ ಮಹಿಳೆ ಗ್ಯಾಂಗ್ ನಲ್ಲಿದ್ದಾರೆ. ಆರೋಪಿಗಳನ್ನು ಹಿಡಿಯಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.