ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಮೋದ್ ತನ್ನ ಪತ್ನಿ ಹಾಗೂ ಪುತ್ರನೊಂದಿಗೆ ತೆಗೆಸಿಕೊಂಡಿದ್ದ ಚಿತ್ರ
ಬೆಂಗಳೂರು: ಉದ್ಯೋಗದಲ್ಲಿ ಬಡ್ತಿ ನೀಡಲಿಲ್ಲವೆಂದು ನಗರದ ಜನಪ್ರಿಯ ಕೆಫೆಯೊಂದರ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೊನ್ನೆ ರಾತ್ರಿ ನಡೆದಿದೆ. ಮಹದೇವಪುರದ ತಮ್ಮ ಸ್ನೇಹಿತನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ ನೋಟ್ ಬರೆದಿಟ್ಟು ಮೃತಪಟ್ಟಿರುವ ವ್ಯಕ್ತಿ, ತಾವು ಕೆಲಸ ಮಾಡುತ್ತಿದ್ದ ಕಂಪೆನಿಯ ಆಡಳಿತ ವರ್ಗದವರೇ ತಮ್ಮ ಸಾವಿಗೆ ಕಾರಣ. ತಮ್ಮ ಅಂಗಾಂಗಳನ್ನು ದಾನ ಮಾಡುವಂತೆ ಕುಟುಂಬದವರಿಗೆ ಸೂಚಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಪ್ರಮೋದ್ ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರು ಮೂಲದ ಇವರು ಮಹದೇವಪುರದ ಕೆಫೆ ಕಾಫಿ ಡೇ ಔಟ್ ಲೆಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಕಚೇರಿಯಲ್ಲಿ ಅಧಿಕ ಕೆಲಸದ ಒತ್ತಡಕ್ಕೆ ಸಿಲುಕಿದ್ದ ಪ್ರಮೋದ್ ಈ ವರ್ಷ ತಮಗೆ ಬಡ್ತಿ ನೀಡಲಿಲ್ಲ ಎಂದು ವಿಪರೀತ ಖಿನ್ನರಾಗಿದ್ದರು.
ಡೆತ್ ನೋಟ್ ನ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.ಡೆತ್ ನೋಟ್ ನಲ್ಲಿ ಪ್ರಮೋದ್, ತಮ್ಮನ್ನು ಬೇರೆಡೆಯಿಂದ ಮಹದೇವಪುರದ ಕೆಫೆ ಕಾಫಿಡೇಗೆ ವರ್ಗಾಯಿಸಲಾಯಿತು.ವರ್ಗ ಮಾಡುವ ಹೊತ್ತಿಗೆ ತಮಗೆ ಬಡ್ತಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ನಂತರ ಸೇಲ್ಸ್ ಟಾರ್ಗೆಟ್ ಮುಟ್ಟದಿದ್ದರೆ ತಮ್ಮ ವೇತನವನ್ನು ತಡೆಹಿಡಿಯುವುದಾಗಿ ಕಂಪೆನಿಯ ವ್ಯವಸ್ಥಾಪಕರು ಬೆದರಿಕೆಯೊಡ್ಡಿದ್ದರು. ಕೆಫೆ ಕಾಫಿ ಡೇಯ ಆಡಳಿತ ವರ್ಗದವರೇ ತಮ್ಮ ಸಾವಿಗೆ ಕಾರಣ ಎಂದು ಬರೆದಿದ್ದಲ್ಲದೆ, ಕಂಪೆನಿಯಲ್ಲಿರುವ ಸೇಲ್ಸ್ ಡೇ ಆಚರಣೆ ಉದ್ಯೋಗಿಗಳ ಮೇಲೆ ವಿಪರೀತ ಒತ್ತಡ ಹೇರುವುದರಿಂದ ಅದನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ತಮ್ಮ ಮಕ್ಕಳು ಮತ್ತು ಕುಟುಂಬಕ್ಕೆ ಹಣಕಾಸಿನ ನೆರವು ಒದಗಿಸುವಂತೆ ಡೆತ್ ನೋಟ್ ನಲ್ಲಿ ಒತ್ತಾಯಿಸಿದ್ದಾರೆ.
ಪೊಲೀಸರು ತನಿಖೆ ನಡೆಸುತ್ತಿದ್ದು ಕಂಪೆನಿಯ ಹಿರಿಯ ಅಧಿಕಾರಿಗಳ ಹೇಳಿಕೆಯನ್ನು ಪಡೆದುಕೊಳ್ಳಬೇಕಿದೆ. ಕೆಫೆ ಕಾಫಿ ಡೇ ಹೊರಡಿಸಿರುವ ಪತ್ರಿಕಾ ಹೇಳಿಕೆಯಲ್ಲಿ, ಈ ಹೊತ್ತಿನಲ್ಲಿ ಅವರ ಕುಟುಂಬದವರಿಗೆ ನೆರವು ನೀಡುತ್ತೇವೆ. ಅಧಿಕಾರಿಗಳಿಗೆ ತನಿಖೆಗೆ ಸಹಕರಿಸುತ್ತೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics