ಹುಬ್ಬಳ್ಳಿ: ಪ್ರತಿದಿನ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಏರ್ ಇಂಡಿಯಾ ವಿಮಾನ ಆಗಸ್ಚ್ ನಿಂದ ಸಂಚರಿಸಲಿದೆ, ಸದ್ಯ ವಾರದಲ್ಲಿ ಐದು ದಿನ ಮಾತ್ರ ವಿಮಾನ ಸಂಚಾರವಿದೆ.
ಏರ್ ಇಂಡಿಯಾ ಮುಖ್ಯ ಕಚೇರಿಯಲ್ಲಿ ಮಂಗಳವಾರ ಸಂಸದ ಪ್ರಹ್ಲಾದ ಜೋಶಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಅವರೊಂದಿಗೆ ಎಂ.ಡಿ. ಅಶ್ವಿನ್ ಅವರನ್ನು ಭೇಟಿಯಾಗಿ ಬೆಂಗಳೂರು-ಹುಬ್ಬಳ್ಳಿ ಏರ್ ಇಂಡಿಯಾ ವಿಮಾನವು ಪ್ರತಿದಿನ ಹಾರಾಟ ನಡೆಸುವಂತೆ ಆಗ್ರಹಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಂಡಿ ಲೋಹಾನಿ, ಆಗಸ್ಟ್ ಮೊದಲ ವಾರದಿಂದ ಬೆಂಗಳೂರು-ಹುಬ್ಬಳ್ಳಿ ಪ್ರತಿದಿನ ಹಾರಾಟ ನಡೆಸಲಾಗುವುದೆಂದು ತಿಳಿಸಿದ್ದಾರೆ. ಮೂರು ತಿಂಗಳ ಹಿಂದೆಯೇ ಹುಬ್ಬಳ್ಳಿ-ಧಾರವಾಡ ವಿಮಾನ ಸಂಚಾರ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಸಿಬ್ಬಂದಿ ಕೊರತೆ ಕಾರಣ ಈ ಯೋಜನೆ ಮುಂದೂಡಲಾಯಿತು.
ಹುಬ್ಬಳ್ಳಿ-ಮುಂಬೈ ನಡುವೆ ಸಂಪರ್ಕ ಕಲ್ಪಿಸಲು ಬಹುದಿನಗಳ ಒತ್ತಾಯವನ್ನು ಈಡೇರಿಸುವಂತೆ ಈ ವೇಳೆ ಕೋರಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಎಂಡಿ ಅಶ್ವಿನ್, ಈ ಮಾರ್ಗ ಮಧ್ಯ ವಿಮಾನ ಹಾರಾಟಕ್ಕೆ ಪೂರ್ವಭಾವಿಯಾಗಿ ಕೈಗೊಳ್ಳಬೇಕಾದ ತಾಂತ್ರಿಕ ಹಾಗೂ ವೇಳಾಪಟ್ಟಿ ಹೊಂದಾಣಿಕೆ ಕಾರ್ಯ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.