ಎಂ. ಕೃಷ್ಣಪ್ಪ, ಪ್ರಿಯಾಕೃಷ್ಣ ಮತ್ತು ಸೋಮಣ್ಣ
ಬೆಂಗಳೂರು: ವಸತಿ ಸಚಿವ ಎಂ. ಕೃಷ್ಣಪ್ಪ, ಅವರ ಪುತ್ರ ಶಾಸಕ ಪ್ರಿಯಾಕೃಷ್ಣ ಮತ್ತು ಎಂಎಲ್ ಸಿ ಸೋಮಣ್ಣ ಮತ್ತು ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಮಾಗಡಿ ಮುಖ್ಯ ರಸ್ತೆಯಲ್ಲಿರುವ ಪೊಲೀಸ್ ವಸತಿ ಗೃಹಗಳ ಸಮುಚ್ಚಯದ ಬಳಿ ಒಂದು ಎಕರೆಗೂ ಹೆಚ್ಚು ವಿಸ್ತಾರದ ಉದ್ಯಾನದಲ್ಲಿ ಸಾಯಿಬಾಬಾ ಸಾರ್ವಜನಿಕ ಗಣಪತಿ ದೇವಸ್ಥಾನ ನಿರ್ಮಿಸಿರುವ ಸಂಬಂಧ ಎಸ್. ರವಿಚಂದ್ರ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನೊಟೀಸ್ ನೀಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಡಾ.ರಾಜ್ ಕುಮಾರ್ ವಾರ್ಡ್ ನಲ್ಲಿರುವ ಪೊಲೀಸ್ ಕಾಲೋನಿಯ ಪಾರ್ಕ್ ನಲ್ಲಿ ದೇವಾಸ್ಥಾನ ಟ್ರಸ್ಟ್ ಅನಧಿಕೃತವಾಗಿ ಸಾಯಿಬಾಬಾ ಸಾರ್ವಜನಿಕ ಗಣಪತಿ ದೇವಾಲಯವನ್ನು ನಿರ್ಮಿಸಿದೆ, ಇದಕ್ಕೆ ಸಚಿವ ಕೃಷ್ಣಪ್ಪಸ ಶಾಸಕ ಪ್ರಿಯಾಕೃಷ್ಣ ಮತ್ತು ಎಂಎಲ್ ಸಿ ಸೋಮಣ್ಣ ಬೆಂಬಲ ಸೂಚಿಸಿದ್ದಾರೆ ಎಂದು ಪಿಐಎಲ್ ನಲ್ಲಿ ಆರೋಪಿಸಲಾಗಿದೆ.