ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡ ತನಗೆ ವಿಐಪಿ ಗೇಟ್ ನಲ್ಲಿ ಬಿಡಲಿಲ್ಲವೆಂಬ ಕಾರಣಕ್ಕೆ ಟೋಲ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ತುಮಕೂರು-ಬೆಂಗಳೂರು ಹೆದ್ದಾರಿಯ ಕ್ಯಾತ್ಸಂದ್ರ ಟೋಲ್ ಬಳಿ ವಿಐಪಿ ಗೇಟ್ ನಲ್ಲಿ ತಮ್ಮ ಕಾರು ಬಿಡಲಿಲ್ಲ ಎಂಬ ಕಾರಣಕ್ಕೆ, ಬೆಂಬಲಿಗರೊಂದಿಗೆ ಟೋಲ್ ನ ಆಫೀಸಿಗೆ ನುಗ್ಗಿದ ಶಾಸಕ ರೋಷಾವೇಷದಿಂದ ಮಲ್ಲಿಕಾರ್ಜುನ್ ಮೇಲೆ ಹಲ್ಲೆ ನಡೆಸಿದ್ದಾರೆ. ಶಾಸಕ ಸುರೇಶ್ ಗೌಡ ಅವರ ಗೂಂಡಾಗಿರಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶಾಸಕ ಸುರೇಶ್ ಗೌಡ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕ್ಯಾತಸಂದ್ರದ ಎನ್.ಹೆಚ್ 4 ಟೋಲ್ ಮ್ಯಾನೇಜರ್ ಮಲ್ಲಿಕಾರ್ಜುನ್ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಟೋಲ್ ಗೇಟ್ ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯಾವಳಿಗಳು ಸೆರೆಯಾಗಿದ್ದು ಖಾಸಗಿ ಚಾನೆಲ್ ಗಳು ಈ ವಿಡಿಯೋ ಪ್ರಸಾರ ಮಾಡಿವೆ. ಇನ್ನೂ ಟೋಲ್ ಗೇಟ್ ಸಿಬ್ಬಂದಿ ಶಾಸಕರ ಜೊತೆ ಒರಟಾಗಿ ವರ್ತಿಸಿದರೆಂದು ಮೂಲಗಳು ತಿಳಿಸಿವೆ.
ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಸುರೇಶ್ ಗೌಡ ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ, ವಿಐಪಿ ಲೇನ್ ನಿರ್ವಹಿಸದಿದ್ದನ್ನು ಮ್ಯಾನೇಜರ್ ಬಳಿ ಪ್ರಶ್ನಿಸಿದೆ ಎಂದು ಶಾಸಕ ಸುರೇಶ್ ಗೌಡ ಸ್ಪಷ್ಟನೆ ನೀಡಿದ್ದಾರೆ.