ಬೆಂಗಳೂರು: ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಮಾಡದೇ ಇರುವುದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದು, ರೈತರ ಸಾಲ ಮನ್ನಾ ಮಾಡಲು ಕ್ರಮ ಕೈಗೊಳ್ಳದೇ ಇದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
2017-18 ನೇ ಸಾಲಿನ ರಾಜ್ಯ ಬಜೆಟ್ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಬಜೆಟ್ ನಲ್ಲಿ ಸಾಲ ಮನ್ನಾ ಮಾಡುತ್ತಾರೆಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿಲ್ಲ. ಸಾಲ ಮನ್ನಾ ಮಾಡದೇ ಇರುವುದಕ್ಕೆ ರೈತ ಸಮುದಾಯದಲ್ಲಿ ಆತಂಕ ಉಂಟಾಗಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಕೂಡಲೇ ರೈತರ ಸಾಲ ಮನ್ನಾ ಮಾಡುವುದಕ್ಕೆ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ಕೇಂದ್ರ ರೈತರ ಸಾಲ ಮನ್ನಾ ಮಾಡದೇ ಇರುವುದರ ಬಗ್ಗೆ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ಸಿದ್ದರಾಮಯ್ಯನವರ ಹೇಳಿಕೆ ಮೂರ್ಖತನದ ಪರಮಾವಧಿಯದ್ದಾಗಿದೆ. ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಸಿದ್ದರಾಮಯ್ಯನವರು ಮೊದಲು ತಮ್ಮ ಸರ್ಕಾರದ ಬೊಕ್ಕಸದಿಂದ ಸಾಲ ಮನ್ನಾ ಮಾಡಲಿ, ನಾವು ಅಧಿಕಾರದಲ್ಲಿರಬೇಕಾದರೆ ಅಂದಿನ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡದೇ 2 ಬಾರಿ ಸಾಲ ಮನ್ನಾ ಮಾಡಿದ್ದೆವು. ಆದ್ದರಿಂದ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದತ್ತ ಕೈತೋರಿಸದೇ ಸಾಲ ಮನ್ನಾ ಮಾಡಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.
"ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಈ ಬಗ್ಗೆ ಕೇಂದ್ರದಲ್ಲಿ ಚರ್ಚಿಸೋಣ ಎಂದು ಸಲಹೆಯನ್ನೂ ನೀಡಿದ್ದು ರೈತರ ಸಾಲ ಮನ್ನಾ ಮಾಡದೇ ಇದ್ದರೆ ಹೋರಾಟ ನಡೆಸುತ್ತೇವೆ ಎಂದು ಸಿದ್ದರಾಮಯ್ಯ ಅವರಿಗೆ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.