ರಾಜ್ಯ

ಕಾವೇರಿ ವಿವಾದ ಸಂಬಂಧ ಸುಪ್ರೀಂ ತೀರ್ಪು: ಕರ್ನಾಟಕದಲ್ಲಿ ಪ್ರತಿಭಟನೆ ಸಾಧ್ಯತೆ

Shilpa D

ಮೈಸೂರು: ಜುಲೈ 11 ರವರೆಗೆ ಪ್ರತಿದಿನ ತಮಿಳುನಾಡಿಗೆ ಕರ್ನಾಟಕದಿಂದ 2ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿರುವುದು ಕಾವೇರಿ ಜಲಾನಯನ ಪ್ರದೇಶದ ರೈತರು ಹಾಗೂ ನಿವಾಸಿಗಳಿಗೆ ಆಘಾತ ನೀಡಿದೆ.

ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ, ತೀರಾ ತಳಮಟ್ಟ ಸಮೀಪಿಸಿದ್ದು ನೀರಾವರಿ ಇಲಾಖೆ ಅಧಿಕಾರಿಗಳು ಆತಂಕದಲ್ಲಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ ಮತ್ತು ಇತರೆ ನಗರಗಳಿಗೆ ಕುಡಿಯುವ ನೀರು ಪೂರೈಕೆಗೆ ಸಮಸ್ಯೆಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿರುವ ವನ್ಯಜೀವಿಗಳಿಗೂ ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ, ನೀರಿನ ಹಳ್ಳಗಳು ಸಂಪೂರ್ಣ ಬತ್ತಿ ಹೋಗಿದ್ದು, ಕಳೆದ ಕೆಲವು ತಿಂಗಳಲ್ಲಿ ಸುಮಾರು 7 ಆನೆಗಳು ಸಾವನ್ನಪ್ಪಿವೆ.

ಮಳೆಯಿಲ್ಲದ ಕಾರಣ ಬಂಡಿಪುರ, ನಾರಹೊಳೆ ಮತ್ತು ಬಿಳಿಗಿರಿ ರಂಗನಸ್ವಾಮಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಸಂಭವಿಸಿದೆ. ಬೆಳದು ನಿಂತ ಫಸಲಿಗೆ ನೀರು ಬಿಡದೇ ಸುಪ್ರೀಂ ಆದೇಶದಂತೆ ತಮಿಳುನಾಡಿಗೆ ನೀರು ಬಿಟ್ಟರೆ ರಾಜ್ಯದ ರೈತರ ಪ್ರಬಲ ವಿರೋಧ ಎದುರಿಸಬೇಕಾಗುತ್ತದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಆತಂಕ ಪಡುತ್ತಿದ್ದಾರೆ.

ಕೆಆರ್ ಎಸ್ ಜಲಾಶಯದಲ್ಲಿ ಉಳಿದಿರುವ 10.5 ಟಿಎಂಸಿ ಅಡಿ ನೀರನ್ನು  ಯುಗಾದಿ ಹಬ್ಬದ ಸಮಯದಲ್ಲಿ ಬಿಡುವಂತೆ ಮಂಡ್ಯ ಭಾಗದ ರೈತರು ಒತ್ತಾಯಿಸಿದ್ದಾರೆ.

ಇಂದಿನ ಪರಿಸತ್ಥಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದನ್ನು ಸಂಪೂರ್ಣವಾಗಿ ವಿರೋಧಿಸಿದ್ದಾರೆ. ಒಂದು ವೇಳೆ ಇದನ್ನು ಧಿಕ್ಕರಿಸಿ ತಮಿಳುನಾಡಿಗೆ ನೀರು ಹರಿಸಿದ್ದೇ ಆದರೇ ರಾಜ್ಯಾದ್ಯಾಂತ ಮತ್ತೆ ಪ್ರತಿಭಟನೆ ಬಂದ್ ಗಳು ನಡೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

SCROLL FOR NEXT