ಬೆಂಗಳೂರು: 1983ರ ಕರ್ನಾಟಕ ರಾಜ್ಯ ಶಿಕ್ಷಣ ಕಾಯ್ದೆ ಅನ್ವಯ ಖಾಸಗಿ ಶಾಲೆಗಳ ಶುಲ್ಕ ನೀತಿಗೆ ಅನೇಕ ಸಿಬಿಎಸ್ಇ ಶಾಲೆಗಳು ವಿರೋಧ ವ್ಯಕ್ತ ಪಡಿಸಿವೆ.
ರಾಜ್ಯದಲ್ಲಿರುವ ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಮಕ್ಕಳ ಸುರಕ್ಷತಾ ನೀತಿ-2016ಕ್ಕೆ ಅನುಗುಣವಾಗಿ ಕರ್ನಾಟಕ ಶಿಕ್ಷಣ ಕಾಯ್ದೆ-1983ಕ್ಕೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಆದರೆ ಸರ್ಕಾರದ ಶುಲ್ಕ ನೀತಿಯನ್ನು ಸಿಬಿಎಸ್ಇ ಶಾಲೆಗಳು ವಿರೋಧಿಸಿವೆ, ತಿದ್ದುಪಡಿ ಕಾಯ್ದೆ ಬಗ್ಗೆ ಅಭ್ಯಂತರವಿಲ್ಲ, ಆದರೆ ಶುಲ್ಕ ನಿಯಂತ್ರಣಕ್ಕೆ ಆಕ್ಷೇಪವಿದೆ ಎಂದು ಹೇಳಿದ್ದಾರೆ.
ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರಕ್ಕೆ ಅವಕಾಶವಿದೆ, ಆದರೆ ಶುಲ್ಕ ನೀತಿ ಜಾರಿ ಅವೈಜ್ಞಾನಿಕವಾದದ್ದು, ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಡೆಲ್ಲಿ ಪಬ್ಲಿಕ್ ಶಾಲೆ ಬೋರ್ಡ್ ಮೆಂಬರ್ ಮನ್ಸೂರ್ ಅಲಿ ಖಾನ್ ಹೇಳಿದ್ದಾರೆ.
ನಾವು ಈಗ ನಿರ್ಧರಿಸುವ ಶುಲ್ಕ ನ್ಯಾಯ ಸಮ್ಮತವಾಗಿದೆ. ಸಿಬಿಎಸ್ಇ ಶಾಲೆಗಳ ಸಂಘದೊಂದಿಗೆ ಸರ್ಕಾರ ಚರ್ಚೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತಿದ್ದುಪಡಿ ಕಾಯ್ದೆ ಜಾರಿಯಾಗುವವರೆಗೂ ಕಾಯುತ್ತೇವೆ, ಒಂದು ವೇಳೆ ಶುಲ್ಕ ನೀತಿ ಅವೈಜ್ಞಾನಿಕವಾಗಿದ್ದರೇ ಅದನ್ನು ನಾವು ಒಪ್ಪುವುದಿಲ್ಲ ಎಂದು ಅವರು ವಿವರಿಸಿದ್ದಾರೆ.