ಬೆಂಗಳೂರು: ಕಳ್ಳರಿಬ್ಬರು ಉದ್ಯಮಿಯೊಬ್ಬರ ಗಮನ ಬೇರೆಡೆ ಸೆಳೆದು 7.5 ಲಕ್ಷ ರುಪಾಯಿಯನ್ನು ದೋಚಿರುವ ಘಟನೆ ಕಳೆದ ಸೋಮವಾರ ನಗರದ ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದೆ.
ಗ್ರಾನೈಟ್ ವ್ಯಾಪಾರ ಮಾಡುತ್ತಿರುವ ಬೆನೆತ್ ಎಂಬುವರು ಸೋಮವಾರ ಜೆಪಿ ನಗರದ ಬ್ಯಾಂಕ್ ನಲ್ಲಿ 7.5 ಲಕ್ಷ ರುಪಾಯಿಯನ್ನು ಡ್ರಾ ಮಾಡಿದ್ದರು. ಹಣ ತೆಗೆದುಕೊಂಡು ಕಾರಿನಲ್ಲಿ ತೆರಳುತ್ತಿದ್ದಾಗ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದ ಕಳ್ಳರು ತಮ್ಮ ಕಾರಿನ ಟೈಯರ್ ಸ್ಪೋಟಗೊಂಡಿದೆ ಎಂದು ಹೇಳಿದ್ದಾರೆ. ಇದರಿಂದ ಕಾರನ್ನು ರಸ್ತೆ ಪಕ್ಕದಲ್ಲಿ ಪಾರ್ಕ್ ಮಾಡಿದ ಬೆನೆತ್ ಕಾರಿನ ಟೈಯರ್ ಅನ್ನು ಬದಲಾಯಿಸಿದ್ದಾರೆ.
ಬೆನೆತ್ ಕಾರಿನ ಟೈಯರ್ ಬದಲಾಯಿಸಿ ಬಂದು ನೋಡುತ್ತಾರೆ ತಾವು ಡ್ರಾ ಮಾಡಿದ್ದ ಹಣದ ಬ್ಯಾಗ್ ನಾಪತ್ತೆಯಾಗಿತ್ತು. ಇದರಿಂದ ಗಾಬರಿಗೊಂಡ ಬೆನೆತ್ ಕೂಡಲೇ ಕೆಎಸ್ ಲೇಔಟ್ ಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಘಟನೆ ನಡೆದ ಸ್ಥಳದ ಸುತ್ತಮುತ್ತ ಇರುವ ಅಂಗಡಿಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ತನಿಖೆ ನಡೆಸುತ್ತಿದ್ದಾರೆ.