ಬೆಂಗಳೂರು: ನೂತನ 2 ಸಾವಿರ ರುಪಾಯಿ ಮುಖಬೆಲೆಯ 32 ಲಕ್ಷ ರುಪಾಯಿ ನೀಡಿ ಒಂದು ಕೆಜಿ ಬಂಗಾರ ಖರೀದಿಸಿದ ಆರೋಪದ ಮೇಲೆ ಮೈಸೂರು ಮೂಲದ ಮೂವರು ವ್ಯಕ್ತಿಗಳನ್ನು ಹಲಸೂರು ಗೇಟ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ವಿನೋದ್(45), ಹೇಮಂತ್(33) ಹಾಗೂ ಹರಿಶ್ ಕುಮಾರ್(33) ಎಂದು ಗುರುತಿಸಲಾಗಿದ್ದು, ಅವರಿಂದ ನಕಲಿ ನೋಟ್ ಮುದ್ರಿಸುತ್ತಿದ್ದ ಕಲರ್ ಪ್ರಿಂಟರ್ ಅನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ.
ಹಲಸೂರು ಗೇಟ್ ಪೊಲೀಸರ ಪ್ರಕಾರ, ಏಪ್ರಿಲ್ 24ರಂದು ಜುಗರಾಜ್ ಎಂಬುವವರು ಚಿನ್ನದ ವ್ಯಾಪಾರಿ ದಿನೇಶ್ ಕುಮಾರ್ ಅವರಿಗೆ ಕರೆ ಮಾಡಿ ತಮ್ಮ ಮಗಳ ಮದುವೆಗೆ 1 ಕೆಜಿ ಬಂಗಾರ ಬೇಕು ಎಂದು ಹೇಳಿದ್ದಾರೆ. ಅಲ್ಲದೆ ಚಿನ್ನ ತೆಗೆದುಕೊಂಡು ಬರಲು ತಮ್ಮ ಮ್ಯಾನೇಜರ್ ನನ್ನು ಕಳುಹಿಸುತ್ತಿರುವುದಾಗಿ ದಿನೇಶ್ ಗೆ ತಿಳಿಸಿದ್ದಾರೆ.
ದಿನೇಶ್ ಕುಮಾರ್ ಅವರು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಜುಗರಾಜ್ ಮ್ಯಾನೇಜರ್ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಗೆ 1 ಕೆಜಿ ಚಿನ್ನ ನೀಡಿ 32 ಲಕ್ಷ ರುಪಾಯಿ ಪಡೆದಿದ್ದಾರೆ. ಆದರೆ ದಿನೇಶ್ ಕುಮಾರ್ ಅವರು ತಮ್ಮ ಅಂಗಡಿಗೆ ಹೋದ ನಂತರ ತಾವು ಮೋಸ ಹೋಗಿರುವುದು ಗೊತ್ತಾಗಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಹಲಸೂರು ಗೇಟ್ ಠಾಣೆ ಪೊಲೀಸರು ಇಂದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics