ಎತ್ತರದ ಪ್ರದೇಶಗಳಲ್ಲಿರುವ ಯೋಧರಿಗೆ ಫುಡ್ ವಾರ್ಮರ್ ಅಭಿವೃದ್ಧಿ ಪಡಿಸಿದ ಮೈಸೂರು ಮೂಲದ ಸಂಸ್ಥೆ
ಮೈಸೂರು: ಸಿಯಾಚಿನ್, ಲಡಾಕ್ ನಂತಹ ಎತ್ತರದ ಪ್ರದೇಶಗಳಲ್ಲಿರುವ ಯೋಧರಿಗಾಗಿ ಮೈಸೂರಿನ ಡಿಫೆನ್ಸ್ ಫುಡ್ ರೀಸರ್ಚ್ ಲ್ಯಾಬೊರೇಟರಿ ಫುಡ್ ವಾರ್ಮರ್ ಸಾಧನವನ್ನು ಕಂಡು ಹಿಡಿದಿದೆ.
ಪುನರ್ಬಳಕೆ ಮಾಡಬಹುದಾದ ಫುಡ್ ವಾರ್ಮರ್ ಪೌಚ್ ಗಳು ಆಹಾರವನ್ನು ಬಿಸಿಯಾಗಿಡಲು ನೆರವಾಗಲಿದ್ದು, ಸಿಯಾಚಿನ್, ಲಡಾಕ್ ನಂತಹ ಎತ್ತರದ ಶೀತ ಪ್ರದೇಶಗಳಲ್ಲಿರುವ ಯೋಧರಿಗೆ ಉಪಯುಕ್ತವಾಗಲಿದೆ. ಫುಡ್ ವಾರ್ಮರ್ ಸಾಧನದೊಂದಿಗೆ ತಾಜ ಮೊಸರು ತಯಾರಕ ಸಾಧನವನ್ನೂ ಸಹ ಡಿಎಫ್ಆರ್ ಎಲ್ ಕಂಡು ಹಿಡಿದಿದೆ.
ಡಿಎಫ್ಆರ್ ಎಲ್ ಸಾಧನ ಸುಮಾರು 2.5 ಕೆ.ಜಿ ತೂಕವಿದ್ದು ಸೇನಾ ಸಿಬ್ಬಂದಿಗಳು ಸುಲಭವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯಬಹುದಾಗಿದೆ. ಪೌಚ್ ನೊಳಗೆ 15-20 ನಿಮಿಷಗಳು ಇರಿಸುವ ಮೂಲಕ ಸೊನ್ನೆಗಿಂತ ಕೆಳಗಿನ ತಾಪಮಾನದಲ್ಲಿಯೂ ಸಹ ಆಹಾರ ಪದಾರ್ಥಗಳನ್ನು ಬಿಸಿ ಮಾಡಬಹುದಾಗಿದೆ.
ಭಾರತೀಯ ಸೇನೆ ತನ್ನ ಸಿಬ್ಬಂದಿಗಳಿಗೆ ಆಹಾರ ಪೂರೈಕೆ ಮಾಡಲು ಪ್ರಸ್ತುತ ಕುದುರೆಗಳ ಮೇಲೆ ಅವಲಂಬಿತವಾಗಿದೆ. ಆದರೆ ಕೆಳಭಾಗದಿಂದ ಯೋಧರಿರುವ ಎತ್ತರದ ಪ್ರದೇಶಗಳಿಗೆ ತೆರಳುವಷ್ಟರಲ್ಲಿ ಆಹಾರ ಪದಾರ್ಥಗಳು ಗಟ್ಟಿಯಾಗಿರುತ್ತವೆ. ಆದ್ದರಿಂದ ಯೋಧರು ಕುದಿಯುವ ನೀರಿನಲ್ಲಿ ಆಹಾರದ ಪೊಟ್ಟಣಗಳನ್ನು ಮುಳುಗಿಸಿ ನಂತರ ಸೇವಿಸಬೇಕಾದ ಸ್ಥಿತಿ ಇದೆ. ಆದರೆ ಈಗ ಮೈಸೂರು ಮೂಲದ ಸಂಸ್ಥೆ ಡಿಎಫ್ಆರ್ ಎಲ್ ಅತ್ಯಂತ ಸುಲಭವಾಗಿ ಯೋಧರೇ ಕೊಂಡೊಯ್ಯಬಹುದಾದ ಫುಡ್ ವಾರ್ಮರ್ ಹಾಗೂ ಕೆಲವೇ ಗಂಟೆಗಳಲ್ಲಿ 5-10 ಲೀಟರ್ ಮೊಸರನ್ನು ತಯಾರಿಸಬಹುದಾದ ಸಾಧನಗಳನ್ನು ಪರಿಚಯಿಸಿದ್ದು, ಯೋಧರಿಗೆ ನೆರವಾಗಲಿದೆ. ಈಶಾನ್ಯ ರಾಜ್ಯ, ಜಮ್ಮು-ಕಾಶ್ಮೀರ ಹಾಗೂ ಉದ್ಧಂಪುರಗಳಲ್ಲಿ ಪ್ರಾಯೋಗಿಕವಾಗಿ ಬಳಕೆ ಮಾಡಲಾಗಿದ್ದು ಯೋಧರು ಸಾಧನಗಳನ್ನು ಮೆಚ್ಚಿಕೊಂಡಿದ್ದಾರೆ ಎಂದು ವಿಜ್ಞಾನಿ ರಾಮಕೃಷ್ಣ ಹಾಗೂ ತಾಂತ್ರಿಕ ಅಧಿಕಾರಿ ನವೀನ್ ಹೇಳಿದ್ದಾರೆ.