ಬೆಂಗಳೂರು: ಖಾಸಗಿ ವೈದ್ಯರು ಶುಕ್ರವಾರ ನಡೆಸಿದ್ದ ಮುಷ್ಕರ ಪರಿಣಾಮ ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆ ಶೇ.30ರಷ್ಟು ಹೆಚ್ಚಳವಾಗಿತ್ತು.
ಕರ್ನಾಟಕ ಖಾಸಗಿ ಆಸ್ಪತ್ರೆಗಳ ತಿದ್ದುಪಡಿಗಳ ಕಾಯ್ದೆ ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರು ನಿನ್ನೆ ಪ್ರತಿಭಟನೆ ನಡೆಸಿದ್ದರು. ಖಾಸಗಿ ಆಸ್ಪತ್ರೆಗಳು ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹೊರ ರೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ವ್ಯವಸ್ಥೆಗಳನ್ನು ಮಾಡಿತ್ತು.
ರಜೆ ಮೇಲೆ ತೆರಳಿದ್ದ ಎಲ್ಲಾ ವೈದ್ಯರ ರಜೆಯನ್ನು ರದ್ದು ಮಾಡಿ, ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿತ್ತು. ಸರ್ಕಾರದ ಆದೇಶದ ಮೇರೆಗೆ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದರಿಂದಾಗಿ ಎಂದಿಗಿಂತ ನಿನ್ನೆ ಹೊರರೋಗಿಗಳ ಸಂಖ್ಯೆ ಶೇ.20-30ರಷ್ಟು ಹೆಚ್ಚಳವಾಗಿತ್ತು ಎಂದು ತಿಳಿದುಬಂದಿದೆ.
ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ಮನೋಜ್ ಕುಮಾರ್ ಮೀನಾ ಅವರು ಮಾತನಾಡಿ, ರಜೆ ಮೇಲೆ ತೆರಳಿದ್ದ ಎಲ್ಲಾ ಸರ್ಕಾರಿ ವೈದ್ಯರೂ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಆದರೆ, ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು, ಖಾಸಗಿ ಆಸ್ಪತ್ರೆಗಳ ಮುಷ್ಕರ ವಿಚಾರ ನನಗೇನೂ ತಿಳಿದಿಲ್ಲ. ಅವರು ಯಾಕೆ ಮುಷ್ಕರ ಮಾಡುತ್ತಿದ್ದಾರೆ ಎನ್ನುವ ವಿಚಾರ ನನಗೆ ಗೊತ್ತಿಲ್ಲ. ಯಾವುದಕ್ಕೆ ವಿರೋಧ ಎನ್ನುವುದೂ ತಿಳಿದಿಲ್ಲ. ನಮ್ಮ ಜತೆ ಯಾರೂ ಈ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ.
ನಾವು ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ವಿಧೇಯಕವನ್ನು ಜಾರಿಗೆ ತರುತ್ತಿದ್ದೇವೆ. ನಾವು ವಿಧೇಕವನ್ನು ಮಂಡಿಸುತ್ತಿರುವುದು ಖಾಸಗಿ ಆಶ್ಪತ್ರೆಗಳ ವಿಚಾರದಲ್ಲಿಯೇ ಹೊರತು ವೈದ್ಯರ ವಿಚಾರದಲ್ಲಿ ಅಲ್ಲ. ವಿಧೇಯಕಕ್ಕೂ ಅವರಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.