ಬೆಳಗಾವಿ: ಕಾರ್ ಪಲ್ಟಿಯಾಗಿ ಇಬ್ಬರು ವೈದ್ಯ ವಿದ್ಯಾರ್ಥಿಗಳು ಸಾವು
ಬೆಳಗಾವಿ: ಕಾರ್ ಪಲ್ಟಿಯಾಗಿ ಇಬ್ಬರು ವೈದ್ಯ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಬೆಳಗಾವಿ ತಾಲೂಕು ಕಮಕಾರಟ್ಟಿ ಸಮೀಪ ನಡೆದಿದೆ.
ಜಯಂತ್ ರಾಯ್(22) ಮತ್ತು ನಿಶಾ(20) ಮೃತ ದುರ್ದೈವಿಗಳೆಂದು ತಿಳಿದು ಬಂದಿದ್ದು ಇವರು ಬೆಳಗಾವಿಯ ಕೆಎಲ್ಇ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ. ಘಟನೆಯಲ್ಲಿ ಇನ್ನೊಬ್ಬ ವ್ಯಕ್ತಿ ಅನುಶ್ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಸೇರಿಸಲಾಗಿದೆ. ಮೂವರೂ ಬಿಹಾರದ ಪಟ್ನಾ ಮೂಲದವರೆನ್ನಲಾಗಿದ್ದು ಹುಬ್ಬಳ್ಳಿಯಿಂದ ಬೆಳಗಾವಿಗೆ ಕಾರ್ ನಲ್ಲಿ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಕಾರನ್ನು ಅತಿಯಾದ ವೇಗದಿಂದ ಚಲಾಯಿಸುತ್ತಿದ್ದದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಘಟನೆ ಸಂಬಂಧ ಹಿರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.