ರಾಜ್ಯ

ಜನನ-ಮರಣ ಪ್ರಮಾಣಪತ್ರದ ದರ ಇಳಿಸಿದ ಬಿಬಿಎಂಪಿ

Shilpa D
ಬೆಂಗಳೂರು: ಜನನ ಮರಣ ಪ್ರಮಾಣ ಪತ್ರಗಳ ಶುಲ್ಕಗಳನ್ನು ಮರು ನಿಗದಿ ಮಾಡಿ ಬಿಬಿಎಂಪಿ  ಆದೇಶ ಹೊರಡಿಸಿದೆ.
ನೂತನ ಆದೇಶದಂತೆ ಜನನ ಅಥವಾ ಮರಣ ಸಂಭವಿಸಿದ ದಿನದಿಂದ 21 ದಿನದೊಳಗೆ ನೋಂದಣಿ ಮಾಡಿಸಿದರೆ ಉಚಿತವಾಗಿ ಪ್ರಮಾಣ ಪತ್ರ ನೀಡಲಾಗುತ್ತದೆ.
22ನೇ ದಿನದಿಂದ 31ನೇ ದಿನದೊಳಗೆ ನೋಂದಣಿ ಮಾಡಿಸಿದರೆ 2 ರೂ., 31ನೇ ದಿನದಿಂದ ಒಂದು ವರ್ಷದೊಳಗೆ ಪಡೆದರೆ 5 ರೂ. ಹಾಗೂ ಒಂದು ವರ್ಷ ಮೇಲ್ಪಟ್ಟು ನೋಂದಣಿಗೆ 10 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಪ್ರಮಾಣ ಪತ್ರಗಳ ವಿತರಣೆಗೆ ಮೊದಲನೆ ವರ್ಷದ ಶೋಧನೆಗಾಗಿ 2 ರೂ. ನಿಗದಿಪಡಿಸಲಾಗಿದ್ದು, ಮುಂದುವರಿಸಿದ ಪ್ರತಿಯೊಂದು ವರ್ಷಕ್ಕೂ ಹೆಚ್ಚುವರಿ 2 ರೂ. ನಿಗದಿ ಮಾಡಲಾಗಿದ್ದು ನವೆಂಬರ್ 1 ರಿಂದಲೇ ಈ ಆದೇಶ ಜಾರಿಗೆ ಬರಲಿದೆ.
ಜತೆಗೆ ಪ್ರತಿ ಜನನ ಪ್ರಮಾಣ ಪತ್ರಕ್ಕೆ 5 ರೂ. ಹಾಗೂ ಅಲಭ್ಯ ಪ್ರಮಾಣ ಪತ್ರ ನೀಡಿಕೆಗಾಗಿ 2 ರೂ. ನಿಗದಿಗೊಳಿಸಲಾಗಿದೆ.
ಪ್ರತಿ ತಿಂಗಳು ಬಿಬಿಎಂಪಿ 15ಸಾವಿರ ಜನನ ಪ್ರಮಾಣ ಪತ್ರ ಹಾಗೂ 5 ಸಾವಿರ ಮರಣ ಪ್ರಮಾಣ ನೀಡುತ್ತದೆ. ಮೊದಲ ಕಾಪಿ ಆಸ್ಪತ್ರೆಯಿಂದ ಉಚಿತವಾಗಿ ದೊರೆಯುತ್ತದೆ, ನಂತರ ಹೆಚ್ಚುವರಿ ಆದೇಶ ಪ್ರತಿಗಳಿಗೆ 50 ರು ನೀಡಬೇಕಿತ್ತು. ಮರಣ ಹಾಗೂ ಜನನ ಪ್ರಮಾಣ ಪತ್ರಗಳಿಗಾಗಿ ಬೆಂಗಳೂರು ಒನ್ ಸೆಂಟರ್ ನಲ್ಲಿ  ನೋಂದಣಿ ಮಾಡಿಸಬೇಕಾಗುತ್ತದೆ. 
ಇಲ್ಲಿಯವರೆಗೂ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ನೀಡಲು 50 ರು ಪಡೆಯುತ್ತಿದ್ದರು ಈಗ ಅದರ ಬೆಲೆ ಕಡಿಮೆಯಿದ್ದು ಹೊಸ ನೀತಿಯಂತೆ ಕಡಿಮೆ ಬೆಲೆಯಲ್ಲಿ ನೀಡಬೇಕೆಂದು ಬಿಬಿಎಂಪಿ ಆಯುಕ್ತ ಮಂಜು ನಾಥ್ ಪ್ರಸಾದ್ ಹೇಳಿದ್ದಾರೆ.
SCROLL FOR NEXT