ಬೆಂಗಳೂರು: ದೆಹಲಿಯಲ್ಲಿ ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆಯ ಬೆನ್ನಲ್ಲೇ ಏರ್ ಏಷ್ಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಯುವತಿಯೊಂದಿಗೆ ಏರ್ಲೈನ್ಸ್ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ನವೆಂಬರ್ 3ರಂದು ಏರ್ ಏಷ್ಯಾ ವಿಮಾನಯಾನದ ಮೂವರು ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬರು ಶುಕ್ರವಾರ ಸದಾಶಿವನಗರ ಪೊಲೀಸ್ಠಾಣೆಗೆ ದೂರು ನೀಡಿದ್ದಾರೆ. ಸಿಬ್ಬಂದಿ ಸನ್ಮಿತ್ ಕರಾಂಡಿಕಾರ್, ಕೈಜದ್ ಸುಂಟೋಕ್, ಜತಿನ್ ರವೀಂದ್ರನ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿರುವ ಯುವತಿ, ನವೆಂಬರ್ 3 ರಂದು ರಾಂಚಿಯಿಂದ ಬೆಂಗಳೂರಿಗೆ ಏರ್ ಏಷ್ಯಾ ವಿಮಾನ ಸಂ.1585 ರಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಯುವತಿ ವಿಮಾನದ ಶೌಚಗೃಹ ಸ್ವಚ್ಛವಾಗಿಲ್ಲ ಎಂದು ವಿಮಾನದ ಸಿಬ್ಬಂದಿಗೆ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ನಮಗೆ ನಮ್ಮ ಕರ್ತವ್ಯದ ಅರಿವಿದೆ, ನೀವು ಹೋಗಿ ನಿಮ್ಮ ಸ್ಥಾನದಲ್ಲಿ ಕುಳಿತುಕೊಳ್ಳಿ ಎಂದು ಸಿಬ್ಬಂದಿಯೊಬ್ಬರು ತನಗೆ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಿಮಾನ ಬೆಂಗಳೂರಿನಲ್ಲಿ ಇಳಿದ ನಂತರ ಮೂವರು ಆರೋಪಿಗಳು ನನ್ನನ್ನು ಅಡ್ಡಗಟ್ಟಿ ಅಸಭ್ಯವಾಗಿ ವರ್ತಿಸಿದರು. ಜತೆಗೆ ನನ್ನನ್ನು ಫೋಟೋ ತೆಗೆದು ನನಗೆ ಕಿರುಕುಳ ನೀಡಿ, ಬೆದರಿಸಿದರು ಎಂದು ಯುವತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics