ಬೆಂಗಳೂರು: 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (ತಿದ್ದುಪಡಿ) ಮಸೂದೆ 2017 (ಕೆಪಿಎಂಇ)ಗೆ ಸಚಿವ ಸಂಪುಟ ತಾತ್ವಿಕ ಒಪ್ಪಿಗೆಯನ್ನಷ್ಟೇ ನೀಡಿದ್ದು, ಮಸೂದೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ಭರವಸೆ ನೀಡಿದ ಬಳಿಕವೂ 'ಬೆಳಗಾವಿ ಚಲೋ' ಪ್ರತಿಭಟನೆ ನಿರ್ಧಾರದಿಂದ ಹಿಂದಕ್ಕೆ ಸರಿಯಲು ಭಾರತೀಯ ವೈದ್ಯಕೀಯ ಸಂಘ ನಿರಾಕರಿಸಿದೆ.
ರಾಜ್ಯ ಸರ್ಕಾರವು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿರುವ 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ' ತಿದ್ದುಪಡಿ ಪ್ರಸ್ತಾವದಲ್ಲಿನ ಆಯ್ದ ಅಂಶಗಳನ್ನು ಕೈಬಿಡುವವರೆಗೆ ಹೋರಾಟ ಮಾಡುವುದಾಗಿ ಹೇಳಿರುವ ಖಾಸಗಿ ವೈದ್ಯರು, ನ.13ರಂದು ಬೆಳಗಾವಿ ಚಲೋ ನಡೆಸುವ ಮೂಲಕ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ನೀಡಿದ್ದಾರೆ.
ಪ್ರತಿಭಟನೆ ಕುರಿತಂತೆ ಮಾತನಾಡಿರುವ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ವೀರಣ್ಣ. ಬಿ ಅವರು, ಮಸೂದೆ ಕುರಿತಂತೆ ಸರ್ಕಾರದೊಂದಿಗೆ ಯಾವುದೇ ರೀತಿಯ ಅಧಿಕೃತ ಮಾತುಕತೆಗಳು ನಡೆದಿಲ್ಲ. ಹೀಗಾಗಿ ಸೋಮವಾರ ಬೆಳಿಗ್ಗೆ 9 ಗಂಟೆಗೆ 20,000 ವೈದ್ಯರು ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಿದ್ದಾರೆಂದು ಹೇಳಿದ್ದಾರೆ.
ಡಾ.ಅಜಯ್ ಕುಮಾರ್ ಅವರು ಮಾತನಾಡಿ, ಮಸೂದೆಯಲ್ಲಿ ನಾಲ್ಕು ಪ್ರಮುಖ ಅಂಶಗಳಿದ್ದು, ಅವುಗಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಷ್ಕರಣೆ ನಡೆಸಬೇಕಿದೆ. ಜಿಲ್ಲಾ ಮಟ್ಟದಲ್ಲಿ ಯಾವುದೇ ದೂರುಗಳ ಪರಿಹಾರ ಸಮಿತಿ ಇರಬಾರದು. ರೋಗಿಯ ಹಕ್ಕು ಕೇವಲ ಮಾರ್ಗದರ್ಶಿಯಾಗಿರಬೇಕೇ ಹೊರತು ಕಾನೂನು ಆಗಿರಬಾರದು. ಚಿಕಿತ್ಸೆಗಳು, ಚಿಕಿತ್ಸಾ ಪ್ರಕ್ರಿಯೆಗಳಿಗೆ ಸರ್ಕಾರ ಶುಲ್ಕವನ್ನು ನಿಗದಿ ಮಾಡಬಾರದು. ವೈದ್ಯರನ್ನು ಅಪರಾಧಿಗಳಂತೆ ನೋಡಬಾರದು ಮತ್ತು ಆಧಾರಗಳಿಲ್ಲದೆ ಅವರನ್ನು ಜೈಲಿಗೆ ಕಳುಹಿಸಬಾರದು ಎಂದು ಹೇಳಿದ್ದಾರೆ.
ಸತ್ತವರ ಕುಟುಂಬಸ್ಥರು ಆಸ್ಪತ್ರೆಗೆ ಹಣ ಕಟ್ಟುವಂತೆ ಕೇಳುವುದು ಅಮಾನವೀಯ ಇದನ್ನು ನಾವು ಒಪ್ಪುತ್ತೇವೆ. ಆದರೆ, ನಾವು ಬೇರೇನು ಮಾಡಲು ಸಾಧ್ಯ. ಲಕ್ಷಾನುಗಟ್ಟಲೇ ಹಣವನ್ನು ಪಾವತಿ ಮಾಡಬೇಕಿದ್ದ ಸಂದರ್ಭದಲ್ಲಿ ಮೃತದೇಹವನ್ನು ನೀಡದಿದ್ದರೆ, ಆಗ ಜನರು ಹಣವನ್ನು ಕಟ್ಟಿ ಮೃತದೇಹವನ್ನು ತೆಗೆದುಕೊಂಡು ಹೋಗುತ್ತದೆ.
ಶುಲ್ಕಗಳನ್ನು ಸರ್ಕಾರವೇ ವಿಧಿಸಿದರೆ, ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಾಗಿ ಹೋಗುತ್ತವೆ. ಹೊಸ ಹೊಸ ತಂತ್ರಜ್ಞಾನಗಳಿಗೆ ಜಾಗವೇ ಇಲ್ಲದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಮಣಿಪಾಲ್ ಆಸ್ಪತ್ರೆಯ ಆಧ್ಯಕ್ಷ ಡಾ.ಸುದರ್ಶನ್ ಬಲ್ಲಾಳ್ ಅವರು ಮಾತನಾಡಿ, ಮಸೂದೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಷ್ಕರಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಈ ಬಗ್ಗೆ ಕಾದು ನೋಡಬೇಕಿದೆ. ಬೆಂಗಳೂರು ಮಣಿಪಾಲ್ ಸಂಸ್ಥೆಯಿಂದ ಬೆಳಗಾವಿಗೆ 8-10 ವೈದ್ಯರು ಹೋಗುತ್ತಿದ್ದಾರೆಂದು ಹೇಳಿದ್ದಾರೆ.