ಬೆಂಗಳೂರು: ಲೋಕಾಯುಕ್ತದಲ್ಲಿರುವ ಸಿಬ್ಬಂದಿಗಳನ್ನು ಹಂತ-ಹಂತವಾಗಿ ಸರ್ಕಾರ ಖಾಲಿ ಮಾಡಿಸುತ್ತಿರುವುದರಿಂದ ಬಾಕಿಯಿರುವ ಪ್ರಕರಗಳ ತನಿಖೆ ಇದೀಗ ಮೂಲೆ ಹಿಡಿಯುತ್ತಿವೆ ಎಂದು ಹೇಳಲಾಗುತ್ತಿದೆ.
ಬಾಕಿಯಿರುವ ಪ್ರಕರಣಗಳ ತನಿಖೆ ನಡೆಸಲು ಸಿಬ್ಬಂದಿಗಳನ್ನು ಸರ್ಕಾರ ನೇಮಿಸದ ಹಿನ್ನಲೆಯಲ್ಲಿ ಬಾಕಿಯಿರುವ ಪ್ರಕರಣಗಳ ತನಿಖೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
23 ಎಸ್ಪಿ ಗಳ ಹುದ್ದೆಗಳ ಪೈಕಿ 17 ಹುದ್ದೆಗಳು ಖಾಲಿಯಿವೆ. 43 ಡಿವೈಎಸ್ಪಿಗಳ ಪೈಕಿ 18 ಹಾಗೂ 90 ಪೊಲೀಸ್ ಇನ್ಸ್ ಪೆಕ್ಟರ್ ಗಳ ಪೈಕಿ 12 ಪೋಸ್ಟ್ ಗಳು ಖಾಲಿಯಿವೆ. ಮೈಸೂರು, ಯಾದಗಿರಿ, ಹಾಸನ, ಬೆಳಗಾವಿ, ಧಾರವಾಡ ಬಿಟ್ಟರೆ ಉಳಿದ ಯಾವು ಜಿಲ್ಲೆಗಳಲ್ಲೂ ಪೂರ್ಣ ಪ್ರಮಾಣದ ಎಸ್ಪಿ ಗಳಿಲ್ಲ. ಇರುವ 7 ಅಧಿಕಾರಿಗಳಿಗೆ 5-7 ಜಿಲ್ಲೆಗಳನ್ನು ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಬೆಂಗಳೂರು ನಗರ ವೊಂದರಲ್ಲಿ 5 ಎಸ್ಪಿ ಹುದ್ದೆಗಳು ಖಾಲಿಯಿದೆ.
ಎಸ್ಪಿ ಹಾಗೂ ಡಿವೈಎಸ್ಪಿ ಹುದ್ದೆಗಳು ತನಿಖೆಯಲ್ಲಿ ಪ್ರಮುಖ ಪಾತ್ರವನ್ನುವಹಿಸಲಿದೆ. ಆದರೆ, ಪ್ರಕರಣಗಳ ತನಿಖೆಗೆ ಅಧಿಕಾರಿಗಳ ಕೊರತೆಯೇ ಎದುರಾಗಿರುವ ಹಿನ್ನಲೆಯಲ್ಲಿ ಲೋಕಾಯುಕ್ತದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ತನಿಖೆಗಳ ಮೇಲೆ ಗಂಭೀರ ಪರಿಣಾಮಗಳು ಬೀರತೊಡಗಿವೆ.
ಲೋಕಾಯುಕ್ತದಲ್ಲಿರುವ ನ್ಯಾಯಾಂಗ ಅಧಿಕಾರಿ ಮಾತನಾಡಿ, ತಿಂಗಳಲ್ಲಿ ನ್ಯಾಯಾಂಗ ಅಧಿಕಾರಿಗಳು 50 ಪ್ರಕರಣಗಳ ತನಿಖೆಯನ್ನು ನಡೆಸಬಹುದು. ಈಗಲೂ ಲೋಕಾಯುಕ್ತದಲ್ಲಿ 90-100ಕ್ಕೂಹೆಚ್ಚು ಹೊಸ ಪ್ರಕರಣಗಳಿದ್ದು, ಅವುಗಳ ತನಿಖೆ ನಡೆಸುವುದು ಅಗತ್ಯವಿದೆ. ತನಿಖೆ ವಿಳಂಬವಾಗಿದ್ದೇ ಆದರೆ, ಇದು ಮುಗ್ದ ಸಾರ್ವಜನಿಕ ಪ್ರತಿನಿಧಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ನಿವೃತ್ತಿ ವೇತನಗಳು ವ್ಯಕ್ತಿಗೆ ಸರಿಯಾದ ಸಮಯಕ್ಕೆ ಸಿಗದೇ ಇರುವುದು ಹಾಗೂ ತಪ್ಪಿತಸ್ಥರಿಗೆ ನೀಡಲಾಗುವ ಶಿಕ್ಷೆ, ಜನತೆಗೆ ರವಾನಿಸಬೇಕಿರುವ ಕಠಿಣ ಸಂದೇಶಗಳ ಮೇಲೂ ಪರಿಣಾಮ ಬೀರುತ್ತದೆ. ಸಿಬ್ಬಂದಿಗಳನ್ನು ಒದಗಿಸುವಂತೆ ಈ ಕಳೆದ ಏಪ್ರಿಲ್ ತಿಂಗಳಿನಲ್ಲೇ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಈ ವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆಗಳು ಬಂದಿಲ್ಲ ಎಂದು ತಿಳಿಸಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿಯವರು ಮಾತನಾಡಿ, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ವಿರುದ್ಧ 2,500 ಪ್ರಕರಣಗಳ ತನಿಖೆ ಬಾಕಿಯಿದೆ. ಆಧಿಕಾರಿಗಳು ರೂ.40,000ಕ್ಕೂ ಅಧಿಕ ವೇತನವನ್ನು ಪಡೆಯುತ್ತಿದ್ದಾರೆ. ಅಲ್ಲದೆ, ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಹಲವು ಪ್ರಕರಣಗಳ ತನಿಖೆ ಬಾಕಿಯಿದೆ ಎಂದು ಹೇಳಿದ್ದಾರೆ.
ನ್ಯಾಯಾಂಗ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ನೇಮಕವನ್ನು ಬಿಡಿ, ಕನಿಷ್ಟ ಪಕ್ಷ ಲೋಕಾಯುಕ್ತಕ್ಕೆ ಸಾಫ್ಟ್'ವೇರ್ ಇಂಜಿನಿಯರ್ ಗಳನ್ನು ನೇಮಕ ಮಾಡಲು ಸರ್ಕಾರ ಒಪ್ಪುತ್ತಿಲ್ಲ. ಸಿಬ್ಬಂದಿಗಳ ನೇಮಕ ಕಾರ್ಯಸಾಧ್ಯವಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಹೇಳುತ್ತಿದೆ ಎಂದು ನ್ಯಾಯಾಂಗ ಅಧಿಕಾರಿಗಳು ಹೇಳಿದ್ದಾರೆ.
ಸಿಬ್ಬಂದಿಗಳ ನೇಮಕ ಕುರಿತು ಈಗಾಗಲೇ ರಾಷ್ಟ್ರೀ ಮಾಹಿತಿ ಕೇಂದ್ರವನ್ನು ಸಂಪರ್ಕಿಸಿದ್ದೆವು. ಆದರೆ, ಇದರಿಂದ ಯಾವುದೇ ಪ್ರಯೋಜನಗಳಾಗಿಲ್ಲ. ನಮ್ಮಲ್ಲಿರುವ ಸಾಫ್ಟ್ ವೇರ್ ಹಾಗೂ ಡಾಟಾವನ್ನು ಇನ್ನೆಷ್ಟು ದಿನಗಳ ಕಾಲ ಸಂರಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಪ್ರತಿಕ್ರಿಯೆ ನೀಡಿ, ಲೋಕಾಯುಕ್ತದಲ್ಲಿ ನ್ಯಾಯಾಂಗ ಅಧಿಕಾರಿಗಳ ಕೊರತೆಯಿರುವುದು ಸತ್ಯ. ಹುದ್ದೆಗೆ ಸೂಕ್ತರೆನಿಸುವವರನ್ನು ನೇಮಕ ಮಾಡಲಾಗುತ್ತದೆ. ಅಗತ್ಯ ಹಾಗೂ ಪ್ರಾಮುಖ್ಯತೆಗೆ ತಕ್ಕಂತೆ ಎಸ್ಪಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos