ಬೆಂಗಳೂರು: ನವೆಂಬರ್ 15ರಿಂದ ಅನ್ವಯವಾಗುವಂತೆ ರೆಸ್ಟೊರೆಂಟ್ ಗಳಲ್ಲಿ ತೆರಿಗೆ ದರ ಇಳಿಕೆಯಾಗುತ್ತದೆ ಎಂದು ಸರಕು ಮತ್ತು ಸೇವಾ ತೆರಿಗೆ ಮಂಡಳಿ ಘೋಷಣೆ ಮಾಡಿದ್ದರೂ ಕೂಡ ನಗರದಲ್ಲಿನ ಹಲವು ರೆಸ್ಟೊರೆಂಟ್ ಗಳಲ್ಲಿ ಪರಿಷ್ಕೃತ ದರವನ್ನು ಇನ್ನೂ ಜಾರಿಗೆ ತಂದಿಲ್ಲ. ಹಲವು ರೆಸ್ಟೊರೆಂಟ್ ಗಳಲ್ಲಿ ಇನ್ನು ಕೂಡ ಗ್ರಾಹಕರಿಗೆ ಪರಿಷ್ಕೃತ ದರ ಶೇಕಡಾ 5ರ ಬದಲಿಗೆ ಶೇಕಡಾ 18ರಷ್ಟು ಜಿಎಸ್ ಟಿ ವಿಧಿಸಲಾಗುತ್ತಿದೆ.
ಇತ್ತೀಚೆಗೆ ಜಿಎಸ್ ಟಿ ಕೌನ್ಸಿಲ್ ಕನಿಷ್ಟ 200 ವಸ್ತುಗಳ ತೆರಿಗೆ ದರಗಳನ್ನು ಪರಿಷ್ಕರಿಸಿ ದರಗಳನ್ನು ಅಗ್ಗಗೊಳಿಸಿತ್ತು. 178 ವಸ್ತುಗಳ ಮೇಲಿನ ತೆರಿಗೆ ದರವನ್ನು ಇಳಿಸಿದ್ದ ಜಿಎಸ್ ಟಿ ಕೌನ್ಸಿಲ್ ಹಿಂದೆ ಇದ್ದ ಶೇಕಡಾ 28ರಿಂದ ಶೇಕಡಾ 18ಕ್ಕೆ ಇಳಿಸಿತ್ತು. ಹವಾ ನಿಯಂತ್ರಿತ ಮತ್ತು ಹವಾ ನಿಯಂತ್ರಿತವಲ್ಲದ ರೆಸ್ಟೊರೆಂಟ್ ಗಳಿಗೆ ತೆರಿಗೆ ದರವನ್ನು ಕ್ರಮವಾಗಿ ಶೇಕಡಾ 18 ಮತ್ತು ಶೇಕಡಾ 12ರಿಂದ ಶೇಕಡಾ 5ಕ್ಕೆ ಇಳಿಸಲಾಗಿತ್ತು.
ಈ ಬಗ್ಗೆ ನಿನ್ನೆ ನಗರದ ಹಲವು ರೆಸ್ಟೊರೆಂಟ್ ಗಳಲ್ಲಿ ಪರೀಕ್ಷೆ ನಡೆಸಿದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್, ತಮಗೆ ಅಧಿಕೃತ ಮಾಹಿತಿ ಸಿಗಬೇಕಾಗಿರುವುದರಿಂದ ಹಿಂದಿನ ತೆರಿಗೆ ದರವನ್ನೆ ಉಳಿಸಿಕೊಂಡಿದ್ದೇವೆ ಎಂದು ಕೆಲವು ರೆಸ್ಟೊರೆಂಟ್ ಮಾಲಿಕರು ಹೇಳುತ್ತಾರೆ. ನಗರದ ಪ್ರಮುಖ ಹೊಟೇಲ್ ನ ಸಹಾಯಕ ವ್ಯವಸ್ಥಾಪಕರು ಪ್ರತಿಕ್ರಿಯೆ ನೀಡಿ, ನಮ್ಮ ಮೇಲಾಧಿಕಾರಿಗಳಿಂದ ಸ್ಪಷ್ಟ ಸೂಚನೆ ಸಿಗಬೇಕಾಗಿರುವುದರಿಂದ ಅಲ್ಲಿಯವರೆಗೆ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದ್ದೇವೆ ಎಂದರು. ನಗರದ ಮತ್ತೊಂದು ಪ್ರತಿಷ್ಟಿತ ಹೊಟೇಲ್ ನಲ್ಲಿಯೂ ಇದೇ ಅಭಿಪ್ರಾಯ ಕೇಳಿಬಂತು. ಕನ್ನಿಂಗ್ ಹ್ಯಾಂ ರಸ್ತೆಯ ರೆಸ್ಟೊರೆಂಟ್ ನ ಚಾರ್ಟೆಡ್ ಅಕೌಂಟೆಂಟ್ ವೊಬ್ಬರು, ನಮಗೆ ತಡವಾಗಿ ಸೂಚನೆ ಬಂದಿದ್ದು ವ್ಯವಸ್ಥೆಯನ್ನು ಅಪ್ ಡೇಟ್ ಮಾಡುತ್ತಿದ್ದೇವೆ ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊಟೇಲ್ ಸಂಘದ ಪ್ರತಿನಿಧಿ ವೀರೇಂದ್ರ ಕಾಮತ್, ಈಗಾಗಲೇ ಅಧಿಕೃತ ಸೂಚನೆ ನೀಡಲಾಗಿದ್ದು, ಎಲ್ಲಾ ರೆಸ್ಟೊರೆಂಟ್ ಗಳಿಗೂ ಇದು ಗೊತ್ತಿದೆ. ಬುಧವಾರದಿಂದ ಎಸಿ ರೆಸ್ಟೊರೆಂಟ್ ಗಳು ಶೇಕಡಾ 18ರಷ್ಟು ತೆರಿಗೆ ವಿಧಿಸುವಂತಿಲ್ಲ. ವಾಣಿಜ್ಯ ತೆರಿಗೆ ಇಲಾಖೆ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು ಅದು ಮಂಗಳವಾರ ಸಾಯಂಕಾಲ ಸಿಕ್ಕಿದೆ. ರೆಸ್ಟೊರೆಂಟ್ ಮಾಲಿಕರಿಗೆ ಇದು ಗೊತ್ತಿದೆ ಎಂದು ಹೇಳಿದರು.