ಬೆಂಗಳೂರು: ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಸಾಧಿಸುವ ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕ ಸಂಬಂಧ ಕರ್ನಾಟಕ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಈ ಬಗ್ಗೆ ವ್ಯಾಪಕ ಹ್ಯಾಶ್ ಟ್ಯಾಗ್ ಗಳು ಹರಿದಾಡುತ್ತಿದ್ದು, ದುಬಾರಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಸಂಬಂದ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ನಿರ್ಧಾರ ಸೂಕ್ತವಾಗಿದೆ ಎಂಬ ಚರ್ಚೆಗಳು ಹರಿದಾಡುತ್ತಿವೆ. ಈ ಬಗ್ಗೆ ಕೆಲವರು ಸರ್ಕಾರದ ನಿರ್ಧಾರ ಸರಿಯಾಗಿದ್ದು, ಖಾಸಗಿ ವೈದ್ಯರ ದುಬಾರಿ ತನಕ್ಕೆ ಬ್ರೇಕ್ ಬೀಳಬೇಕು ಎಂದು ವಾದಿಸಿದ್ದಾರೆ.
ಖಾಸಗಿ ವೈದ್ಯರ ವಿರೋಧ, ಸರ್ಕಾರದ ಹಠಮಾರಿ ತನಕ್ಕೂ ಪ್ರಶ್ನೆ!
ಅಂತೆಯೇ ಖಾಸಗಿ ವೈದ್ಯರ ಪರವಾಗಿಯೂ ಒಂದಷ್ಟು ಮಂದಿ ವಾದಿಸುತ್ತಿದ್ದು, ಸರ್ಕಾರದ ಕಾಯ್ದೆ ಖಾಸಗಿ ವೈದ್ಯರಿಗೆ ಮರಣಶಾಸನವಾಗಲಿದೆ ಎಂದು ಕೆಲವರು ತಮ್ಮ ಚರ್ಚೆ ಮಂಡಿಸಿದ್ದಾರೆ. ಅಲ್ಲದೆ ವೈದ್ಯರ ಮುಷ್ಕರದಿಂದಾಗಿ ರಾಜ್ಯದಲ್ಲಿ ಅಮಾಯಕ ರೋಗಿಗಳು ಸಾವನ್ನಪ್ಪುತ್ತಿದ್ದರೂ ಸರ್ಕಾರವೇಕೆ ತನ್ನ ಹಠವನ್ನು ಬಿಡುತ್ತಿಲ್ಲ ಎಂದು ಕುರಿಕು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗಾದರೆ ಕಾಯ್ದೆಯಲ್ಲಿ ಅಂತಹುದೇನಿದೆ..ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾದ ಪ್ರಮುಖಾಂಶಗಳು ಇಲ್ಲಿವೆ
1) ಖಾಸಗಿ ಆಸ್ಪತ್ರೆಗಳಲ್ಲಿ ದೊರಕುವ ಚಿಕಿತ್ಸೆಗೆ ಬೇಕಾಬಿಟ್ಟಿ ದರ ವಿದಿಸಿ ಬಡವ ಶ್ರೀಮಂತರೆನ್ನದೆ ಹಣ ಕೀಳುವ ಆಸ್ಪತ್ರೆಗಳು ಇನ್ನು ಮುಂದೆ ಯಾವ ಚಿಕಿತ್ಸೆಗೆ ಯಾವ ದರ ಅಂತ ಸರ್ಕಾರ ನಿಗದಿಪಡಿಸಿದ ದರ ಆಸ್ಪತ್ರೆಗಳ ರಿಸೆಪ್ಷನ್ ಹಾಲ್ ನಲ್ಲಿ ಹಾಕಬೇಕು.
2) ಎಲ್ಲಾ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ಏಕ ರೂಪದ ಚಿಕಿತ್ಸೆ ದರ ಅನುಸರಿಸಬೇಕು.
3) ರೋಗಿಗೆ ತಾನು ಪಡೆಯಲು ಬಯಸುವ ಚಿಕಿತ್ಸೆಯ ಸಂಪೂರ್ಣ ಚಿಕಿತ್ಸೆಯ ಮುನ್ನ ಬೆಡ್ ಚಾರ್ಜ್, ಚಿಕಿತ್ಸೆಯ ವೆಚ್ಚ ಹಾಗು ಔಷದಿಯ ವೆಚ್ಚದ ಎಸ್ಟಿಮೇಟ್ ಕಾಪೀ ನೀಡಬೇಕು.
4) ಎಮರ್ಜೆನ್ಸಿ ವೇಳೆ ಹಣ ಪಾವತಿಗೆ ಒತ್ತಾಯಿಸುವಂತಿಲ್ಲ.
5) ವೈದ್ಯರು ಇನ್ನು ಮುಂದೆ ರೋಗಿಗೆ ಬರೆಯುವ ಔಷಧಿಗಳ ಹೆಸರನ್ನು ಹಾಗು ಚಿಕಿತ್ಸೆ ಕೊಡುತ್ತಿರುವ ವಿಷಯದ ಕುರಿತು ರೋಗಿಗೆ ಅರ್ಥವಾಗುವ ಹಾಗೆ ಬರೆಯಬೇಕು.
6) ರೋಗಿಯು ಚಿಕಿತ್ಸೆ ಫಲಕಾರಿಯಾಗದೆ ಮರಣಹೊಂದಿದ ಸಂದರ್ಭದಲ್ಲಿ ಬಿಲ್ ಪಾವತಿಗಾಗಿ ಸಂಬಂಧಿಕರಿಗೆ ಹಿಂಸಿಸಬಾರದು ಹಾಗು ಬಿಲ್ ಪಾವತಿಯಾಗದೆ ಶವ ಕೊಡದೆ ನಿರಾಕರಿಸುವಂತಿಲ್ಲ.
7) ರೋಗಿಯ ಖಾಸಗಿತನ ಕಾಪಾಡಬೇಕು .
8) ವೈದ್ಯರು ಯಾವ ನಿರ್ಧಾರಕ್ಕೂ ಮುನ್ನ ರೋಗಿಯ ಸಂಬಂಧಿಕರ ಒಪ್ಪಿಗೆ ಪಡೆಯಬೇಕು.
9) ಇನ್ನು ಮುಂದೆ ಪ್ರಾರಂಭವಾಗುವ ಖಾಸಗಿ ಲ್ಯಾಬ್ ಗಳು ಸರ್ಕಾರಿ ಆಸ್ಪತ್ರೆಯಿಂದ 200 ಮಿಟರ್ ದೂರದಲ್ಲಿ ಇರಬೇಕು.