ಬೆಂಗಳೂರು: ರಾಜ್ಯ ಸರ್ಕಾರದ ಉದ್ದೇಶಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ(ಕೆಪಿಎಂಇ) ಕಾಯ್ದೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಯಾದಗಿರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ.
ಬೆಂಗಳೂರು ಸೇರಿದಂತೆ ಇತರೆ ಕೆಲವು ಜಿಲ್ಲೆಗಳಲ್ಲಿ ಖಾಸಗಿ ವೈದ್ಯರು ಮುಷ್ಕರ ಹಿಂಪಡೆದಿದ್ದರೂ ಹೈದರಾಬಾದ್ ಕರ್ನಾಟಕ ಸೇರಿದಂತೆ ಇತರೆ ಕೆಲವು ಜಿಲ್ಲೆಗಳಲ್ಲಿ ಖಾಸಗಿ ವೈದ್ಯರು ಮುಷ್ಕರ ಮುಂದುವೆರಿಸಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದಾರೆ.
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಯಾದಗಿರಿ ಜಿಲ್ಲೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಂದು ಮೂವರು ಮೃತಪಟ್ಟಿದ್ದು, ಶಾಹಾಪೂರ ತಾಲೂಕಿನ ಕಾಡಮಗೇರೆಯ ಫಾತಿಮಾ ಬೇಗಂ ಹಾಗೂ ಶಿವರಾಯ ಮತ್ತು ಯಾದಗಿರಿ ತಾಲೂಕಿನ ಹೊಸಹಳ್ಳಿ ಗ್ರಾಮದ ರಾಮು ಎಂಬುವವರು ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಪೂತ್ತೂರಿನಲ್ಲೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಬಾಲಕಿಯೊಬ್ಬರು ಮೃತಪಟ್ಟಿದ್ದಾರೆ.
ಕೆಪಿಎಂಇ ಕಾಯ್ದೆ ವಿರೋಧಿಸಿ ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಖಾಸಗಿ ವೈದ್ಯರು ಇಂದು ಸಹ ಮುಷ್ಕರ ಮುಂದುವರೆಸಿದ್ದಾರೆ.