ರಾಜ್ಯ

ಬೆಂಗಳೂರು: ವೃದ್ದ ದಂಪತಿ ಹತ್ಯೆ, ಮೊಮ್ಮಗ ಸೇರಿ ಮೂವರ ಬಂಧನ

Raghavendra Adiga
ಬೆಂಗಳೂರು: ಬೆಂಗಳುರಿನ ಮಾರತ್ ಹಳ್ಳಿ ಸಮೀಪದ ಅಶ್ವಥ್ ನಗರದಲ್ಲಿ ವೃದ್ದ ದಂಪತಿಗಳ ಕೊಲೆ ನಡೆದಿದೆ. ಗೋವಿಂದನ್‌ (65) ಹಾಗೂ ಅವರ ಪತ್ನಿ ಸರೋಜಮ್ಮ (62) ಅವರುಗಳನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. 
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ (ಬಿಇಎಲ್‌) ನಿವೃತ್ತ ನೌಕರರಾಗಿದ್ದ ಗೋವಿಂದನ್‌ ಹಾಗೂ ಪತ್ನಿ ಸರೋಜಮ್ಮ ಇಬ್ಬರೇ ಮನೆಯಲ್ಲಿದ್ದ ವೇಳೆ ಈ ಹತ್ಯೆ ನಡೆದಿದೆ. ಈ ಸಂಬಂಧ ಪೋಲೀಸರು ಅವರ ಮೊಮ್ಮಗ ಸೇರಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ದಂಪತಿಗಳ ಮೊಮ್ಮಗನಾದ ಪ್ರಮೋದ್ ಹಾಗೂ ಅವನ ಸ್ನೇಹಿತ ಹುಸೇನ್ ಪಾಷಾ, ಪ್ರವೀಣ್  ಅವರನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಈ ನಡುವೆ ಪೋಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದ ಹುಸೇನ್ ಕಾಲಿಗೆ ಪೋಲೀಸರು ಗುಂಡು ಹಾರಿಸಿ ನಂತರ ಬಂಧಿಸಿದ್ದಾರೆ.
ಅಶ್ವಥ್‌ ನಗರದ ಎರಡನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ ವಾಸವಿದ್ದ ಈ ದಂಪತಿಗಳನ್ನು ನ.26 ರಂದು ದುಷ್ಕರ್ಮಿಗಳು ಕೈ-ಕಾಲು ಕಟ್ಟಿ ಹತ್ಯೆ ಮಾಡಿದ್ದರು. ಆದರೆ ಈ ಹತ್ಯೆ ನಡೆದಿರುವುದು ನಿನ್ನೆಯವರೆಗೂ ಯಾರಿಗೂ ತಿಳಿದಿರಲಿಲ್ಲ. ನಿನ್ನೆ ರಾತ್ರಿ ಮನೆಯಿಂದ ದುರ್ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೋಲೀಸರು ಬಾಗಿಲು ಒಡೆದು ನೋಡಿದಾಗ ಕೊಲೆ ನಡೆದಿರುವುದು ಪತ್ತೆಯಾಗಿದೆ.
"ಚಾಕುವಿನಿಂದ ಇರಿದು ದಂಪತಿಯನ್ನು ಹತ್ಯೆ ಮಾಡಿರುವ ದುಷ್ಕರ್ಮಿಗಳು, ಆತ್ಮಹತ್ಯೆ ಎಂದು ಬಿಂಬಿಸುವ ಉದ್ದೇಶದಿಂದ ಅವರಿಬ್ಬರ ಶವಗಳನ್ನು ಕೊಠಡಿಯಲ್ಲಿ ನೇತು ಹಾಕಿ ಪರಾರಿಯಾಗಿದ್ದಾರೆ. ಮನೆಯ ಬೀರುಗಳಲ್ಲಿರುವ ವಸ್ತುಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದವು." ಎಂದು ಪೋಲೀಸರು ತಿಳಿಸಿದ್ದಾರೆ.
ಆಸ್ತಿಗಾಗಿ ಹತ್ಯೆ ನಡೆದಿರುವ ಸಾಧ್ಯತೆಗಳಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಪೋಲೀಸರು ಇದೀಗ ವಶಕ್ಕೆ ಪಡೆದ ವ್ಯಕ್ತಿಗಳಿಂದ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಇದರೋಡನೆಯೇ ಮನೆಯ ಮುಂಭಾಗದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಹ ಪರಿಶೀಲಿಸುತ್ತಿದ್ದಾರೆ.
SCROLL FOR NEXT