ರಾಜ್ಯ ಆರೋಗ್ಯ ಸಚಿವ ರಮೇಶ್ ಕುಮಾರ್
ಕಲಬುರಗಿ: ವೈದ್ಯರಿಗೆ ಸಹಾಯವಾಗುವ ಸಲುವಾಗಿ ಕೆಪಿಎಂಇ ತಿದ್ದುಪಡಿ ಕಾಯ್ದೆಯನ್ನು ಸರ್ಕಾರ ದುರ್ಬಲಗೊಳಿಸಿಲ್ಲ ಎಂದು ರಾಜ್ಯ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವೈದ್ಯರಿಗೆ ಸಹಾಯ ಮಾಡುವ ಸಲುವಾಗಿ ಸರ್ಕಾರ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ಕಾಯ್ದೆ 2017ನ್ನು ದುರ್ಬಲಗೊಳಿಸುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಕೆಪಿಎಂಇ ತಿದ್ದುಪಡಿ ಕಾಯ್ದೆ ಕುರಿತಂತೆ ಸರ್ಕಾರದ ಮೇಲೆ ಆರೋಪ ಮಾಡುತ್ತಿರುವವರು ತಿದ್ದುಪಡಿಯಾಗಿರುವ ಕಾಯ್ದೆಯನ್ನು ಸರಿಯಾಗಿ ಓದಿಲ್ಲ ಎಂದು ಹೇಳಿದ್ದಾರೆ.
ಕೆಪಿಎಂಇ ತಿದ್ದುಪಡಿ ಮಸೂದೆಯನ್ನು ಸರ್ಕಾರ ದುರ್ಬಲಗೊಳಿಸಿಲ್ಲ. ನಕಲಿ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸಲು ಅದರಲ್ಲಿ ಅವಕಾಶವಿದೆ. ರೋಗಿಗಳ ಸಾವು ಅಥವಾ ಅವಘಡಗಳಿಗೆ ಕಾರಣವಾಗುವ ವೈದ್ಯರಿಗೆ ದಂಡ ವಿಧಿಸಲಾಗುವುದು. ಈ ವಿಧೇಯಕವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗಿರುವ ಶುಲ್ಕ ಪಟ್ಟಿಯಂತೆಯೇ ಆಸ್ಪತ್ರಗಳು ಎಲ್ಲಾ ರೋಗಿಗಳಿಗೂ ಶುಲ್ಕವನ್ನು ವಿಧಿಸಲಿದೆ. ಶುಲ್ಕಪಟ್ಟಿಯಲ್ಲಿರುವುದಕ್ಕಿಂತಲೂ ಹೆಚ್ಚಿನ ಹಣವನ್ನು ಆಸ್ಪತ್ರೆಗಳು ಪಡೆದಿದ್ದೇ ಆದರೆ, ರೋಗಿಗಳ ಕುಟುಂಬಸ್ಥರು ಆಸ್ಪತ್ರೆ ವಿರುದ್ದ ದೂರು ದಾಖಲಿಸಬಹುದು.
ರೋಗಿಗಳ ಕುಂದುಕೊರತೆಗಳನ್ನು ಆಲಿಸಲು ಜಿಲ್ಲೆಗಳಲ್ಲಿ ಸಮಿತಿಯನ್ನು ರಚಿಸಲಾಗಿದೆ. ರೋಗಿಗಳು ಸಮಿತಿ ಮೂಲಕ ದೂರುಗಳನ್ನು ದಾಖಲಿಸಬಹುದಾಗಿದೆ. ಸಮಿತಿಗೆ ಎಲ್ಲಾ ರೀತಿಯ ಅಧಿಕಾರವಿದೆ. ಸಮಿತಿಯಲ್ಲಿ ಜಿಲ್ಲಾ ತಜ್ಞರು, ಜಿಲ್ಲಾ ಆರೋಗ್ಯ ಅಧಿಕಾರಿ, ಭಾರತೀಯ ವೈದ್ಯಕೀಯ ಸಂಘದ ಸದಸ್ಯ ಹಾಗೂ ಮಹಿಳಾ ಸಮುದಾಯದ ಸದಸ್ಯೆರು ಅಥವಾ ಎನ್'ಜಿಒಗಳಿರುತ್ತಾರೆ.
ಸಮಿತಿಯು ಕೇವಲ 2 ಬಾರಿ ಮಾತ್ರ ವೈದ್ಯರಿಗೆ ಅಥವಾ ಆಸ್ಪತ್ರೆಗಳಿಗೆ ದಂಡವನ್ನು ವಿಧಿಸುತ್ತದೆ. ಎರಡಕ್ಕಿಂತಲೂ ಹೆಚ್ಚು ಅದೇ ರೀತಿಯ ತಪ್ಪುಗಳನ್ನು ಮಾಡಿದ್ದೇ ಆದರೆ, ಸಮಿತಿ ಐಎಂಸಿಗೆ ಗಮನಕ್ಕೆ ತರುತ್ತದೆ. ಒಂದು ವೇಳೆ ಯಾವುದೇ ವ್ಯಕ್ತಿ ತಪ್ಪು ಮಾಹಿತಿಯನ್ನು ನೀಡಿದ್ದೇ ಆದರೆ, ಆ ವ್ಯಕ್ತಿಯನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.