ರಾಜ್ಯ

ಗೌರಿ ಲಂಕೇಶ್ ಹಂತಕರ ಬಗ್ಗೆ ಖಚಿತ ಸುಳಿವು ಸಿಕ್ಕಿದೆ: ರಾಮಲಿಂಗಾ ರೆಡ್ಡಿ

Lingaraj Badiger
ಚಿಕ್ಕಬಳ್ಳಾಪುರ: ಪತ್ರಕರ್ತೆ, ಸಾಹಿತಿ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್‌ ಹಂತಕರ ಬಗ್ಗೆ ಖಚಿತ ಸುಳಿವು ಸಿಕ್ಕಿದೆ ಎಂದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಸೋಮವಾರ ಹೇಳಿದ್ದಾರೆ. 
ಇಂದು ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಗೌರಿ ಲಂಕೇಶ್  ಹತ್ಯೆ ಪ್ರಕರಣದ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ. ಅವರನ್ನು ಯಾರು ಹತ್ಯೆ ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತಾಗಿದೆ ಸದ್ಯ ವಿಶೇಷ ತನಿಖಾ ತಂಡ(ಎಸ್ಐಟಿ) ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದೆ ಎಂದಿದ್ದಾರೆ.
ಸದ್ಯ ಹಂತಕರ ಸುಳಿವಿನ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲು ಆಗುವುದಿಲ್ಲ. ಒಂದೊಮ್ಮೆ ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸದೆ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದರೆ ಪ್ರಕರಣ ಬಿದ್ದು ಹೋಗುತ್ತದೆ. ಆದ್ದರಿಂದ ಸಾಕ್ಷ್ಯಾಧಾರ ಸಂಗ್ರಹಿಸಿ ಬಳಿಕವಷ್ಟೇ ಆ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಮಲಿಂಗಾ ರೆಡ್ಡಿ ಅವರು, ಬಿಜೆಪಿ ಮುಖಂಡರಿಗೆ ವಾರಕ್ಕೊಂದು ಹೇಳಿಕೆ ನೀಡಬೇಕು ಎಂದು ವರಿಷ್ಠರು ಸೂಚಿಸಿದ್ದಾರೆ. ಹೀಗಾಗಿ ಏನೂ ವಿಷಯಗಳು ಇಲ್ಲದಿದ್ದಾಗ ವಾರಕ್ಕೊಂದು ಪತ್ರಿಕಾಗೋಷ್ಠಿ ಕರೆದು ಸುಮ್ಮನೆ ಕಾಂಗ್ರೆಸ್‌ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಹೇಳಿಕೆ ಕೊಡುವುದೇ ಕೆಲವರಿಗೆ ಒಂದು ಚಟವಾಗಿದೆ. ಅಮಿತ್‌ ಷಾ, ಪ್ರಧಾನಿ ಮೋದಿ ಅವರು ಒಂದಲ್ಲ ಹತ್ತು ಬಾರಿ ರಾಜ್ಯಕ್ಕೆ ಬಂದು ಹೋಗಲಿ. ಇಲ್ಲಿ ಗೆಲ್ಲುವುದೇ ಕಾಂಗ್ರೆಸ್. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರು.
SCROLL FOR NEXT