ಬಾಳೆಹಣ್ಣಿನ ಸಿಪ್ಪೆಯೊಳಗೆ ಹಣ
ಬೆಂಗಳೂರು: ಜೈಲಿನಲ್ಲಿರುವ ಕೈದಿಗಳಿಗೆ ಪೊಲೀಸ್ ಅಧಿಕಾರಿಗಳು ಲಂಚ ಪಡೆದು ವಿಶೇಷ ಸವಲತ್ತುಗಳನ್ನು ನೀಡುತ್ತಿದ್ದಾರೆ ಎಂಬ ಆರೋಪ ಇತ್ತೀಚೆಗೆ ಕರ್ನಾಟಕದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿತ್ತು.
ಈ ಸುದ್ದಿ ಮರೆಯಾಗುವ ಮುನ್ನವೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜೈಲಿನಲ್ಲಿರುವ ಕೈದಿಗಳಿಗೆ ಹಣ ಹೇಗೆ ಕಳ್ಳ ಸಾಗಣೆಯಾಗುತ್ತದೆ ಎಂಬ ಅಡಿ ಬರಹದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಫೇಸ್ ಬುಕ್ ನಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಗಂಗಾಧರ್ ಹೊನ್ನಳ್ಳಿ ಎಂಬ ಖಾತೆದಾರರು ಈ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ.
ಜೈಲ್ ಕೈದಿಗಳಿಗೆ ಹಣ ತಲುಪಿಸುವ ವಿಧಾನ..ಎಂಬ ಅಡಿಬರಹದಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ಜೈಲು ಕೈದಿಗಳಿಗೆ ಅವರ ಸಂಬಂಧಿಕರು ಮತ್ತು ಸ್ನೇಹಿತರು ತಂದುಕೊಡುವ ಬಾಳೆಹಣ್ಣಿನಲ್ಲಿ ಹಣವನ್ನು ಬಚ್ಚಿಟ್ಟು ಹೇಗೆ ಜೈಲಿನೊಳಗಿರುವ ಕೈದಿಗಳಿಗೆ ರವಾನೆ ಮಾಡಲಾಗುತ್ತದೆ ಎಂಬುದನ್ನು ವಿವರಿಸಲಾಗಿದೆ. ಬಾಳೆಹಣ್ಣಿನ ಒಂದು ಭಾಗದ ಸಿಪ್ಪೆಯನ್ನು ಜಾಗರೂಕವಾಗಿ ಕತ್ತರಿಸಿ ಅದರೊಳಗಿರುವ ತಿರುಳನ್ನು ತೆಗೆದು ಹಾಕಲಾಗಿರುತ್ತದೆ. ಬಳಿಕ ಹಣದ ನೋಟುಗಳನ್ನು ವೃತ್ತಾಕಾರವಾಗಿ ಮಡಿಸಿ ಅದನ್ನು ಬಿಳಿ ಬಣ್ಣದ ಕವರ್ ನೊಳಗೆ ಇಟ್ಟು ಅದಕ್ಕೆ ಟೇಪ್ ಮಾಡಿ ಅದನ್ನು ಬಾಳೆಹಣ್ಣಿನ ತಿರುಳಿನಂತೆಯೇ ಮಡಿಸಿ ಬಾಳೆಸಿಪ್ಪೆಯೊಳಗೆ ಇಟ್ಟು ಮತ್ತೆ ಬಿಳಿ (ಪಾರದರ್ಶಕ ನೀರಿನ ಬಣ್ಣದ ಟೇಪ್) ಬಣ್ಣದ ಟೇಪ್ ಹಾಕಲಾಗುತ್ತದೆ.
ಬಳಿಕ ಇವುಗಳನ್ನು ಕೈದಿಗಳಿಗೆ ಹಣ್ಣು ನೀಡುವ ನೆಪದಲ್ಲಿ ಅವರಿಗೆ ಜೈಲಿನಲ್ಲಿ ನೀಡಲಾಗುತ್ತದೆ. ಆ ಮೂಲಕ ಜೈಲಿನ ಹೊರಗಿನಿಂದ ಜೈಲಿನೊಳಗೆ ಹಣ ವರ್ಗಾವಣೆಯಾಗುವ ಪ್ರಕ್ರಿಯೆಯನ್ನು ವಿಡಿಯೋದಲ್ಲಿ ವಿವರಿಸಲಾಗಿದೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.
ಆದರೆ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಕರ್ನಾಟಕದ್ದೇ ಅಥವಾ ಬೇರೆ ರಾಜ್ಯದ ವಿಡಿಯೋ ಆಗಿರಬಹುದೇ ಎಂದು ತಿಳಿದುಬಂದಿಲ್ಲ. ಈ ವಿಡಿಯೋ ಕುರಿತಂತೆ ಪೊಲೀಸ್ ಇಲಾಖೆ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.