ರಾಜ್ಯ

ಬೆಂಗಳೂರು: ಕಟ್ಟಡ ಕುಸಿತ ಪ್ರಕರಣ- ಮಾಲೀಕ ಬಂಧನ

Manjula VN
ಬೆಂಗಳೂರು: ಈಜಿಪುರದಲ್ಲಿ ಸಂಭವಿಸಿದ ಕಟ್ಟಡ ಕುಸಿದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲೀಕನನ್ನು ವಿವೇಕ ನಗರ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ. 
ಕಟ್ಟಡ ಕುಸಿತ ದುರಂತ ಸಂಭವಿಸುತ್ತಿದ್ದಂತೆಯೇ ಮಾಲೀಕ ಎಸ್. ಗುಣೇಶ್ ನಾಪತ್ತೆಯಾಗಿದ್ದ. ಗುಣೇಶ್ ವಿರುದ್ಧ ಸುರಕ್ಷತೆಗೆ ಕುತ್ತು ತಂದ (ಐಪಿಸಿ 336), ನಿರ್ಲಕ್ಷ್ಯ (ಐಪಿಸಿ 338) ಹಾಗೂ ಅಜಾಗರೂಕತೆಯಿಂದ ಉಂಟಾದ ಸಾವು (ಐಪಿಸಿ 304) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದರು. 
ಸುಮಾರು 35 ವರ್ಷದ ಹಳೆಯದಾದ ಕಟ್ಟಡ ಶಿಥಿಲಗೊಂಡಿತ್ತು. ಅದನ್ನು ಸರಿಪಡಿಸುವಂತೆ ಹೇಳಿದರೂ ಮನೆ ಮಾಲೀಕ ಗುಣೇಶ್ ನಿರ್ಲಕ್ಷ್ಯವಹಿಸಿದ್ದರು. ಮಾಲೀಕನ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಲಿಸಿದ್ದಾರೆ. 
ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ ಕಟ್ಟಡವನ್ನು 1961ರಲ್ಲಿ ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ. ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಪೊಲೀಸರು ಈ ವರೆಗೂ ಯಾವುದೇ ಪ್ರಕರಣಗಳನ್ನು ದಾಖಲಿಸಿಕೊಂಡಿಲ್ಲ. ಕಟ್ಟಡ ಕುಸಿತಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ. ತನಿಖಾ ಮೂಲಗಳು ತಿಳಿಸಿರುವ ಪ್ರಕಾರ, ಈಗಾಗಲೇ ಎಫ್ಎಸ್ಎಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಸಿಲಿಂಡರ್ ಸ್ಫೋಟದಿಂದ ಕಟ್ಟಡ ಕುಸಿದು ಬಿದ್ದಿದೆಯೋ ಅಥವಾ ಇಲ್ಲೋ ಎಂಬುದು ವರದಿಗಳಿಂದ ತಿಳಿದುಬರಬೇಕಿದೆ. ಒಂದು ವೇಳೆ ಸಿಲಿಂಡರ್ ಸ್ಫೋಟದಿಂದಲೇ ಕಟ್ಟಡ ಕುಸಿದುಬಿದ್ದಿತ್ತು ಎಂದಾದರೆ, ಬಿಬಿಎಂಪಿ ವಿರುದ್ಧ ನಿರ್ಲಕ್ಷ್ಯ ಪ್ರಕರನ್ನು ದಾಖಲಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿವೆ.
ಇನ್ನು ದುರಂತದಲ್ಲಿ ಪವಾಡ ಸದೃಶವಾಗಿ ಪಾರಾಗಿರುವ ಮೂರು ವರ್ಷದ ಬಾಲಕಿ ಸಂಜನಾಗೆ ವಿಕ್ಟೋರಿಯಾ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಸದ್ಯಕ್ಕೆ ಬಾಲಕಿಯ ಸ್ಥಿತಿ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 
ಅ.16 ರಂದು ಈಜಿಪುರದಲ್ಲಿ ಸಿಲಿಂಡರ್ ಸ್ಫೋಟದಂದ ಕಟ್ಟಡ ಕುಸಿದುಬಿದ್ದು 7 ಮಂದಿ ದುರ್ಮರಣವನ್ನಪ್ಪಿದ್ದರು. ಕಟ್ಟಡ ಕುಸಿದ ಪರಿಣಾಮ ಕಟ್ಟಡ ಅವಶೇಷಗಳಡಿ ಮೂರು ವರ್ಷದ ಸಂಜನಾ ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಳು. 
SCROLL FOR NEXT