ರಾಜ್ಯ

ಇತಿಹಾಸ ಪ್ರಸಿದ್ಧ ಮಲೆ ಮಹೇದೇಶ್ವರ ಸ್ವಾಮಿ ರಥೋತ್ಸವಕ್ಕೆ ಹರಿದು ಬಂದ ಜನಸಾಗರ

Srinivasamurthy VN
ಚಾಮರಾಜನಗರ: ಕರ್ನಾಟಕದ ಖ್ಯಾತ ಇತಿಹಾಸ ಪ್ರಸಿದ್ಧ ಪವಿತ್ರ ಕ್ಷೇತ್ರ ಮಲೆ ಮಹೇದೇಶ್ವರ ಸ್ವಾಮಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ದೀಪಾವಳಿಯ ಅಂಗವಾಗಿ ಕಳೆದ ಮೂರು ದಿನಗಳಿಂದಲೂ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಸ್ವಾಮಿ ದೇಗುಲದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಮೂರನೇ ದಿನವಾದ ಇಂದು ದೇವರ ರಥೋತ್ಸವ  ಕಾರ್ಯಕ್ರಮವು ವಿಜೃಂಭಣೆಯಿಂದ ನೇರವೇರಿತು. ಇಂದು ಬೆಳಗ್ಗೆ 10 ಗಂಟೆಗೆ ಆರಂಭವಾದ ಮಹದೇಶ್ವರ ಸ್ವಾಮಿಯ ಮಹಾರಥೋತ್ಸವದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಕೇರಳ,  ತಮಿಳುನಾಡು ಮತ್ತು ಆಂಧ್ರ ಪ್ರದೇಶ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಮಹದೇಶ್ವರನ ಕೃಪೆಗೆ ಪಾತ್ರರಾದರು.
ಕರ್ನಾಟಕದ ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಲೆ ಮಹದೇಶ್ವರ ದೇಗುಲದಲ್ಲಿ ಮಹಾ ರಥೋತ್ಸವವು ದೀಪಾವಳಿ ಹಬ್ಬದ ಅಂಗವಾಗಿ ಮೂರು ದಿನಗಳ ಕಾಲ ನಡೆಯುತ್ತಿದ್ದು, ಜಾತ್ರೆಯ ಮೊದಲನೇ ದಿನ  ಮಹದೇಶ್ವರನಿಗೆ ಎಣ್ಣೆ ಮಜ್ಜನ ನಡೆದರೆ, ಎರಡನೇ ದಿನ ಹಾಲರವಿ ಉತ್ಸವ ನಡೆಯಿತು. ಇಂದು ಜಾತ್ರೆಯ ಮೂರನೇ ಮತ್ತು ಅಂತಿಮ ದಿನವಾಗಿದ್ದು, ಇಂದು ಮಹೇದೇಶ್ವರ ಸ್ವಾಮಿಯ ಮಹಾರಥೋತ್ಸವ ನಡೆಯಿತು. 
ರಥೋತ್ಸವ ವೇಳೆಯಲ್ಲಿ ವಿವಿಧ ಕಲಾ ತಂಡಗಳು ವೀರಗಾಸೆ, ಕಂಸಾಳೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನ ನೀಡಿದವು.
ರಥೋತ್ಸವ ವೇಳೆ ಕಾಲ್ತುಳಿತ, ಪೊಲೀಸರಿಂದ ಲಾಠಿ ಪ್ರಹಾರ
ಇನ್ನು ರಥೋತ್ಸವ ವೇಳೆ ಅತಿಯಾದ ನೂಕು ನುಗ್ಗಲು ಸಂಭವಿಸಿದ ಪರಿಣಾಮ ಕಾಲ್ತುಳಿತ ಕೂಡ ಉಂಟಾಗಿತ್ತು. ಈ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಕೆಲ ಸಿಬ್ಬಂದಿಗಳಿಗೂ ಗಾಯವಾಗಿತ್ತು. ಹೀಗಾಗಿ ಪರಿಸ್ಥಿತಿ ನಿಯಂತ್ರಿಸುವ  ಉದ್ದೇಶದಿಂದ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ರಥೋತ್ಸವ ಯಾವುದೇ ಅಡ್ಡಿಯಿಲ್ಲದೇ ನಡೆಯಿತು.
SCROLL FOR NEXT