ಬೆಂಗಳೂರು: ಕಾರ್ಮಿಕ ವರ್ಗದ ಜನರಿಗೆ ಸಹಾಯಕವಾಗಲಿರುವ 'ನಮ್ಮ ಟೈಗರ್' ಸೇವೆಯನ್ನು ಉದ್ಘಾಟಿಸಲು ನಾನು ಸಿದ್ಧನಿದ್ದೇನೆಂದು ಜೆಡಿಎಸ್ ರಾಷ್ಟ್ರಾಧ್ಯಾಕ್ಷ ಹೆಚ್.ಡಿ. ದೇವೇಗೌಡ ಅವರು ಶುಕ್ರುವಾರ ಹೇಳಿದ್ದಾರೆ.
ಮೊಬೈಲ್ ಆ್ಯಪ್ ಆಧಾರಿತ ಕ್ಯಾಬ್ ಸೇವಾ ಕಂಪನಿಗಳಾದ ಓಲಾ, ಉಬರ್ ಕಂಪನಿಗೆ ಪರ್ಯಾಯವಾಗಿ ಚಾಲಕರು ಹಾಗೂ ಮಾಲೀಕರೇ ಸೇರಿ ರೂಪಿಸಿರುವ ನೂತನ ಆ್ಯಪ್ 'ನಮ್ಮ ಟೈಗರ್' ಜಾರಿಯಾಗಲು ಸಿದ್ಧಗೊಂಡಿದ್ದು, ಶೀಘ್ರದಲ್ಲಿಯೇ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರು ಬಿಡುಗಡೆ ಮಾಡಲಿದ್ದಾರೆ.
ನಮ್ಮ ಟೈಗರ್ ಕ್ಯಾಬ್ ಸೇವೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕ್ಯಾಬ್ ಚಾಲಕ ಸಲೀಮ್ ಅವರು, ವಿರಾಮವಿಲ್ಲದೆಯೇ ಸುದೀರ್ಘ ಗಂಟೆಗಳ ಕಾಲ ಕೆಲಸ ಮಾಡುವುದು ದೊಡ್ಡ ಸವಾಲಾಗಿದೆ. ಶ್ರಮಪಟ್ಟು ಕೆಲಸ ಮಾಡಿದರು ಸೂಕ್ತ ಸಮಯಕ್ಕೆ ವೇತನ ಬರುವುದಿಲ್ಲ. ಪ್ರೋತ್ಸಾಹ ಧನ ಪಡೆಯುವುದಂತೂ ಬಹಳ ಕಷ್ಟ. ಹೊಸದಾಗಿ ಬರುದ್ದಿರುವ ನಮ್ಮ ಟೈಗರ್ ನಿಂದ ನಮ್ಮ ಸಮಸ್ಯೆಗಳು ದೂರಾಗುತ್ತವೆಂದು ನಂಬಿದ್ದೇನೆಂದು ಹೇಳಿದ್ದಾರೆ.
ಮತ್ತೊಬ್ಬ ಕ್ಯಾಬ್ ಚಾಲಕ ನರೇಶ್ ಮಾತನಾಡಿ, ದುಡ್ಡು ಮಾಡುವ ಸಲುವಾಗಿ ನಾನು ಮಂಡ್ಯದಿಂದ ಬೆಂಗಳೂರಿಗೆ ಬಂದಿದ್ದೇನೆ. ಕಾರಿನ ಮೇಲಿರುವ ಸಾಲ ತೀರಿಸಲು ಸಾಕಷ್ಟು ಶ್ರಮಪಡುತ್ತಿದ್ದೇನೆ. ಆರಂಭದಲ್ಲಿ ಪ್ರೋತ್ಸಹ ಧನವನ್ನು ಹೆಚ್ಚಾಗಿ ನೀಡಲಾಗುತ್ತದೆ ಎಂದು ಭರವಸೆನೀಡಿದ್ದರು. ಇದೀಗ ಯಾವುದೂ ನೀಡುತ್ತಿಲ್ಲ. ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕುಮಾರಸ್ವಾಮಿಯವರು ನಮ್ಮ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆಯನ್ನು ನೀಡಿದ್ದರು. ಆ ಭರವಸೆಯನ್ನು ನಂಬಿದ್ದೇನೆಂದು ತಿಳಿಸಿದ್ದಾರೆ.
ನಮ್ಮ ಟೈಗರ್ ಕ್ಯಾಬ್ ಚಾಲಕರಿಗೆ ಸಹಾಯಕವಾಗಿದ್ದು, ಚಾಲಕರಿಗೆ ರೂ.12 ಲಕ್ಷ ವಿಮೆಯನ್ನು ನೀಡಲಾಗುತ್ತಿದೆ. ಅಲ್ಲದೆ, ಚಾಲಕರ ಮಕ್ಕಳಿಗೆ ಪ್ರತೀವರ್ಷ ಉಚಿತವಾಗಿ ಪುಸ್ತಕಗಳನ್ನು ನೀಡಲಾಗುತ್ತದೆ.
ತಿಂಗಳಲ್ಲಿ ಎರಡು ಬಾರಿ ಕಾರನ್ನು ಸ್ವಚ್ಛಗೊಳಿಸುವ, ಪ್ರತೀ 10,000 ಕಿಮೀ ಬಳಿಕ ಉಚಿತ ಆಯಿಲ್ ಸೇವೆ, ವಾರ್ಷಿಕ ವಾಹನ ವಿಮೆ ಹಾಗೂ ರಸ್ತೆ ತೆರಿಗೆ, ಕಂಪನಿಯಿಂದ ಶೇ.12 ರಷ್ಟು ಕಮಿಷನ್ ನೀಡಲಾಗುತ್ತದೆ.
ಕ್ಯಾಬ್ ಸೇವೆ ವೇಳೆ ಗ್ರಾಹಕರಿಗೆ ಗೌಪ್ಯವಾಗಿ ಯಾವುದೇ ರೀತಿಯ ಹೆಚ್ಚಿನ ಹಣವನ್ನು ಪಡೆಯಲಾಗುವುದಿಲ್ಲ. ಹೊಸ ಕಂಪನಿಯದಲ್ಲಿ ಎರಡು ಬಗೆಯ ಕ್ಯಾಬ್ ಗಳನ್ನು ಪರಿಚಯಿಸಲಾಗಿದ್ದು, ಮಿನಿ ಕ್ಯಾಬ್ ಗೆ ಪ್ರತಿ ಕಿ.ಮೀ.ಗೆ ರೂ.12.50 ಹಾಗೂ ಸೆಡಾನ್ ರೂ.14.50 ದರವಿದೆ.