ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕೇವಲ ಒಂದು ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ಮೊದಲು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಯಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು.
2018ರ ಮಾರ್ಚ್/ ಎಪ್ರಿಲ್ ಪರೀಕ್ಷೆಯಲ್ಲಿ ದ್ವಿತೀಯ ಪಿಯಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಒಂದು ಭಾಷೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿ ಇಲಾಖೆ ನಿರ್ದೇಶನ ನೀಡಿದೆ. ಸೆಪ್ಟಂಬರ್ 30 ರೊಳಗೆ ವಿದ್ಯಾರ್ಥಿಗಳು ತಾವು ಪರೀಕ್ಷೆ ಬರೆಯುವ ಭಾಷೆಯನ್ನು ಆಯ್ಕೆ ಮಾಡಲು ಗಡುವು ನೀಡಲಾಗಿದೆ.
ಇತ್ತೀಚಿನ ಕೆಲ ವರ್ಷಗಳಲ್ಲಿ ವಿದ್ಯಾರ್ಥಿಗಳು ಕೆಲವೊಂದು ಪ್ರಶ್ನೆ ಪತ್ರಿಕೆಗಳನ್ನು ಕನ್ನಡದಲ್ಲಿ ಮತ್ತೆ ಕೆಲವು ಪ್ರಶ್ನೆ ಪತ್ರಿಕೆಗಳನ್ನು ಇಂಗ್ಲೀಷ್ ನಲ್ಲಿ ಬರೆಯುತ್ತಿದ್ದರು. ಇದರಿಂದ ಮೌಲ್ಯ ಮಾಪನದ ವೇಳೆ ಗೊಂದಲ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು ನಾವು ಈ ನಿರ್ಧಾರ ಕೈಗೊಂಡಿದ್ದಾಗಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ತಾವು ಉತ್ತರ ಬರೆಯುವ ಭಾಷೆಯ ಆಯ್ಕೆ ಮಾಡಿದ ನಂತರ ಕಾಲೇಜುಗಳು ರವಾನಿಸಿದ ಚಿತ್ರಣದ ಆಧಾರದ ಮೇಲೆ ಪ್ರಶ್ನೆ ಪತ್ರಿಕೆ ಕಳುಹಿಸಲು ಸಿದ್ಧತೆ ನಡೆಸಲಾಗುವುದು. ತಮ್ಮ ಭಾಷೆಯ ಆಯ್ಕೆ ನಂತರ ಮಾತ್ರವೇ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು.
ಪ್ರಶ್ನೆ ಪತ್ರಿಕೆಗಳಲ್ಲಿ ಕೆಲವೊಂದು ತಾಂತ್ರಿಕ ಶಬ್ದಗಳನ್ನು ಆಂಗ್ಲ ಭಾಷೆಯಲ್ಲಿ ಬರೆಯಲು ಅವಕಾಶ ಕೊಡಲಾಗುವುದು ಎಂದು ಇಲಾಖೆ ತಿಳಿಸಿದೆ. 2017ರ ಮಾರ್ಚ್ ತಿಂಗಳಲ್ಲಿ ಸುಮಾರು 1.2 ಲಕ್ಷ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಮತ್ತು 2.55 ವಿದ್ಯಾರ್ಥಿಗಳು ಇಂಗ್ಲಿಷ್ ನಲ್ಲಿ ಪರೀಕ್ಷೆ ಬರೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics