ನಿತ್ಯೋತ್ಸವ ಕವಿ, ಕೆಎಸ್ ನಿಸಾರ್ ಅಹಮದ್ ಅವರು ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ದಸರಾಗೆ ಚಾಲನೆ ನೀಡಿದರು.
ಮೈಸೂರು: ಇಂದಿನಿಂದ ನಾಡಿನಾದ್ಯಂತ ನವರಾತ್ರಿ ಉತ್ಸವ ಆರಂಭವಾಗಿದೆ. 9 ದಿನಗಳ ಕಾಲ ನಡೆಯುವ ಉತ್ಸವ ಇದೇ 30 ರಂದು ವಿಜಯದಶಮಿಯಂದು ಜಂಬೂಸವಾರಿಯೊಂದಿಗೆ ಮುಕ್ತಾಯವಾಗಲಿದೆ. ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.
ನಾಡಹಬ್ಬ, ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ನಿತ್ಯೋತ್ಸವ ಕವಿ, ಸಾಹಿತಿ ಕೆ.ಎಸ್.ನಿಸಾರ್ ಅಹಮದ್ ಅವರು ಚಾಮುಂಡಿಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಶುಭ ತುಲಾ ಲಗ್ನದಲ್ಲಿ ಅಗ್ರಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರ ಗಣ್ಯರು ಈ ಸಂದರ್ಭಕ್ಕೆ ಸಾಕ್ಷಿಯಾದರು.
ಇಂದು ನಸುಕಿನ ಜಾವ 4 ಗಂಟೆಯಿಂದಲೇ ಪುರೋಹಿತರು ಚಾಮುಂಡಿ ಬೆಟ್ಟದಲ್ಲಿ ಪೂಜಾ ವಿಧಿ ವಿಧಾನಗಳ ಸಿದ್ಧತೆಯಲ್ಲಿ ಮಗ್ನರಾಗಿದ್ದರು.ಪುರೋಹಿತರು ಚಾಮುಂಡೇಶ್ವರಿ ಮೂರ್ತಿಗೆ ಸ್ನಾನ ಮಾಡಿಸಿ ದೇವಿಗೆ ರೇಷ್ಮೆ ಸೀರೆ ಉಡಿಸಿದರು. ಬೆಳ್ಳಿ ರಥದಲ್ಲಿ ಅಲಂಕಾರಿಕ ಹೂವುಗಳಿಂದ ಅಲಂಕರಿಸಲಾಗಿದ್ದು, ಹಬ್ಬದ ಸಮಯದಲ್ಲಿ ದೇವಸ್ಥಾನಕ್ಕೆ ಸಾರ್ವಜನಿಕ ಭೇಟಿಗೆ ನಿರ್ಬಂಧ ಹೇರಲಾಗಿದೆ. 10 ದಿನ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದೆ. ಸೆ. 30 ರಂದು ಜಂಬೂಸವಾರಿ ನಡೆಯಲಿದೆ.
ಅತಿವೃಷ್ಟಿ ಮತ್ತು ಅನಾವೃಷ್ಟಿಯ ನಡುವೆಯೂ, ಈ ಬಾರಿ ಸಂಪ್ರದಾಯ ಮತ್ತು ಸಂಸ್ಕೃತಿಗೆ ಧಕ್ಕೆಯುಂಟಾಗದಂತೆ ದೇಶದ ಸಂವಿಧಾನ, ಪ್ರಜಾಸತ್ತಾತ್ಮಕತೆ ಮತ್ತು ಸಮಾನತೆಯನ್ನು ಹಬ್ಬದ ಮೂಲಕ ಸಾರಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಆ ನಿಟ್ಟಿನಲ್ಲಿ ಕಾರ್ಯಕ್ರಮಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿತ್ತು.
ಉದಾರ ಮತ್ತು ವಿವಾದ ರಹಿತ ಕವಿ ನಿಸಾರ್ ಅಹ್ಮದ್ ಅವರಿಗೆ ಸರ್ಕಾರ ನಂದಿ ಧ್ವಜದೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿತು. ಡ್ರಮ್ ನ ಸಂಗೀತಕ್ಕೆ ಜನಪದ ಕಲಾವಿದರು ನೃತ್ಯ ಮಾಡಿದರು. ದಸರಾ ಕ್ರೀಡೆ, ಕುಸ್ತಿ ಮತ್ತು ಯುವ ದಸರಾ ಹೊರತುಪಡಿಸಿ ಸಾಂಸ್ಕೃತಿಕ ಕಾರ್ಯಕ್ರಮ 6 ಸ್ಥಳಗಳಲ್ಲಿ ನಡೆಯಲಿದೆ.
ಮೈಸೂರು ಅರಮನೆ ರಾಣಿ ಪ್ರಮೋದಾ ದೇವಿ ಒಡೆಯರ್ ಅವರ ನೇತೃತ್ವದಲ್ಲಿ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮೈಸೂರು ಅರಮನೆಯೊಳಗೆ ನಡೆಯುವ ಖಾಸಗಿ ದರ್ಬಾರ್ ಇನ್ನು ಕೂಡ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿದೆ. ರಾಣಿ ಪ್ರಮೋದಾ ದೇವಿಯವರು ಖುದ್ದಾಗಿ ಖಾಸಗಿ ದರ್ಬಾರ್ ನ ಮೇಲ್ವಿಚಾರಣೆ ನಡೆಸಿ 9 ದಿನಗಳ ಕಾಲ ದರ್ಬಾರ್ ಗೆ ಬೇಕಾದ ಸಾಂಪ್ರದಾಯಿಕ ನಿಲುವಂಗಿಗಳು, ಮೈಸೂರು ಪೇಟಾ ಮತ್ತು ಆಭರಣಗಳನ್ನು ಬಳಸುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೈಸೂರು ಯುವರಾಜ ಯದುವೀರ್ ಕೃಷ್ಣದತ್ತ ನರಸಿಂಹರಾಜ ಒಡೆಯರ್ ಸಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ದರ್ಬಾರ್ ಸಭಾಂಗಣದಲ್ಲಿ ಚಿನ್ನದ ರಥ ಸಜ್ಜಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡಿ ಬೆಟ್ಟದ ಮೇಲೆ ಪೊಲೀಸ್ ಸಹಾಯವಾಣಿಯನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ ಇಂದು ಅವರು ದಸರಾ ಚಲನಚಿತ್ರೋತ್ಸವ, ಕ್ರೀಡಾ ಉತ್ಸವ, ಮಹಿಳಾ ದಸರ, ಆಹಾರ ಮೇಳ, ಕುಸ್ತಿ ಸ್ಪರ್ಧೆ, ಪುಸ್ತಕ ಮೇಳ, ಪುಷ್ಪ ಪ್ರದರ್ಶನ , ರಂಗಾಯಣ ನಾಟಕೋತ್ಸವ, ದಸರಾ ಪ್ರದರ್ಶನ ಮತ್ತು ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಾಜ್ಯ ವಿದ್ವಾನ್ ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ.
ಮೈಸೂರು ದಸರಾ ಸಮಯದಲ್ಲಿ ಯುವ ದಸರಾ ಯುವಕ-ಯುವತಿಯರ ಮುಖ್ಯ ಆಕರ್ಷಣೆಯಾಗಿದೆ. ನಾಳೆಯಿಂದ ಇದೇ 29ರವರೆಗೆ ಮೈಸೂರಿನ ಮಹಾರಾಜ ಕಾಲೇಜು ಕ್ರೀಡಾಂಗಣದಲ್ಲಿ ಯುವ ದಸರಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ನಾಳೆ ಸಂಜೆ 6 ಗಂಟೆಗೆ ಯುವ ದಸರಾವನ್ನು ಉದ್ಘಾಟಿಸಲಿದ್ದು ನಟರಾದ ಸೃಜನ್ ಲೋಕೇಶ್ ಮತ್ತು ರಚಿತಾ ರಾಮ್ ಉಪಸ್ಥಿತರಿರುತ್ತಾರೆ ಎಂದು ಯುವ ದಸರಾ ಉಪ ಸಮಿತಿ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos