ಬೆಂಗಳೂರು: ನಗರದ ಉದ್ಯಮಿಯೊಬ್ಬರು ತನಗೆ ಅಪರಿಚಿತರಿಂದ 2 ಕೋಟಿ ರೂ.ನೀಡುವಂತೆ ಬೆದರಿಕೆ ಕರೆ ಬಂದಿದೆ ಎಂದು ಪೋಲೀಸರಿಗೆ ದೂರಿತ್ತಿದ್ದಾರೆ.
ನಂದಿನಿ ಲೇ ಔಟ್ ನ ಸತ್ಯ ಪ್ರಕಾಶ್ ಮಂಗಳವಾರ ವಾಟ್ ಅಪ್ಪ್ ಕರೆ ಸ್ವೀಕರಿಸಿದ್ದು ಆ ವೇಳೆ ಅಪರಿಚಿತರು ಹಿಂದಿ ಭಾಷೆಯಲ್ಲಿ ಅವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ತನ್ನ ಬಾಸ್ ಗೆ 2 ಕೋಟಿ ರೂ.ನೀಡುವಂತೆ ಉದ್ಯಮಿಗೆ ಅಪರಿಚಿತ ಕರೆ ಮಾಡಿ ತಿಳಿಸಿದ್ದಾರೆ. ಹಾಗೊಂದು ವೇಳೆ ಉದ್ಯಮಿ ಅಷ್ಟು ಮೊತ್ತವನ್ನು ನೀದಲು ವಿಫಲವಾದಲ್ಲಿ ಅವರನ್ನು ಕೊಲೆಗೈಯುವುದಾಕಿ ಹೇಳಲಾಗಿದೆ.
ಉದ್ಯಮಿ ಪ್ರಕಾಶ್ ತನ್ನ ಕುಟುಂಬದೊಂದಿಗೆ ದೇವಾಲಯದಲ್ಲಿದ್ದ ಸಮಯ ಈ ಕರೆ ಸ್ವೀಕರಿಸಿದ್ದರು. ತಕ್ಷಣ ಸಂಪರ್ಕ ಕಡಿತಗೊಳಿಸಿದ ಅವರು ಈ ಸಂಬಂಧ ಸದಾಶಿವನಗರ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.
ಫ್ಲವರ್ ಡೆಕರೇಷನ್ ವ್ಯವಹಾರ ನಡೆಸುತ್ತಿರುವ ಪ್ರಕಾಶ್, ತನಗೆ ಬಂದ ಅಪರಿಚಿತ ಕರೆಯಲ್ಲಿ "ನೀವು ಎರಡು ಕನ್ವಿನ್ಷನ್ ಹಾಲ್ ಹೊಂದಿದ್ದೀರಿ ಎಂದು ನನಗೆ ತಿಳಿದಿದೆ. ನಾಳೆ ಒಳಗೆ ಹಣ ಪಾವತಿ ಮಾಡಿ. ನೀವು ಪೊಲೀಸರಿಗೆ ತಿಳಿಸಿದರೆ, ನನ್ನ ಜನರು ನಿಮ್ಮನ್ನು ಕೊಲ್ಲುತ್ತಾರೆ." ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ.
ಆದಾಗ್ಯೂ,ಪ್ರಕಾಶ್ ಯಾವುದೇ ಕನ್ವಿನ್ಷನ್ ಹಾಲ್ ಹೊಂದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಎರಡು ವಾರಗಳ ಹಿಂದೆ,ಇನ್ನೋರ್ವ ಅಪರಿಚಿತ ಪ್ರಕಾಶ್ ಗೆ ಕರೆ ಮಾಡಿ ತಮ್ಮಿಂದ ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸುವಂತೆ ಒತ್ತಡ ಹೇರಿದ್ದರು. ಆಗ ಪ್ರಕಾಶ್ ಕರೆಯನ್ನು ನಿರ್ಲ್ಯಕ್ಷಿಸಿದ್ದರು.