ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಜಯಂತ್ ಪಟೇಲ್ ಅವರು ಮಂಗಳವಾರ ದಿಢೀರ್ ರಾಜಿನಾಮೆ ನೀಡಿದ್ದು, ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ. ಮತ್ತೊಂದೆಡೆ ಜಯಂತ್ ಪಟೇಲ್ ಅವರ ರಾಜೀನಾಮೆ ಖಂಡಿಸಿ ಬೆಂಗಳೂರು ವಕೀಲರ ಸಂಘದಿಂದ ಹೈಕೋರ್ಟ್ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಕೆ ಮುಖರ್ಜಿ ಅವರು ಅಕ್ಟೋಬರ್ 9ರಂದು ನಿವೃತ್ತಿಯಾಗುತ್ತಿದ್ದು, ಅವರ ನಂತರ ಎರಡನೇ ಸ್ಥಾನದಲ್ಲಿದ್ದ ಜಯಂತ್ ಪಟೇಲ್ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ನೀಡಬೇಕಿತ್ತು. ಆದರೆ ದೇಶದ ಹೈಕೋರ್ಟ್ ಗಳ ನ್ಯಾಯಮೂರ್ತಿಗಳಲ್ಲೇ ಹಿರಿಯರಾದ ಜಯಂತ್ ಪಟೇಲ್ ರನ್ನು ಅಲಹಾಬಾದ್ ಹೈಕೋರ್ಟ್ ನ ಮೂರನೇ ನ್ಯಾಯಾಧೀಶರಾಗಿ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ರಾಜ್ಯ ವಕೀಲರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂನಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ ಎಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟೇಗೌಡ ಖಂಡಿಸಿದ್ದಾರೆ. ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದ್ದು ಪ್ರಾಮಾಣಿಕ ನ್ಯಾಯಮೂರ್ತಿಗಳ ಮುಕ್ತ ಕಾರ್ಯ ನಿರ್ವಹಣೆಗೆ ಅಡ್ಡಿಯಾಗಿದೆ’ ಎಂದು ರಾಜ್ಯ ವಕೀಲರ ಸಂಘ ಆರೋಪಿಸಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿಬಿ ಜಯಚಂದ್ರ ಅವರು, ನ್ಯಾಯಮೂರ್ತಿ ಪಟೇಲ್ ಅವರ ರಾಜಿನಾಮೆ ದುರದೃಷ್ಟಕರ. ನಾನು ನೋಡಿದ ಪ್ರಾಮಾಣಿಕ ನ್ಯಾಯಾಧೀಶರಲ್ಲಿ ಅವರೂ ಒಬ್ಬರಾಗಿದ್ದರು ಎಂದಿದ್ದಾರೆ.
2016ರ ಫೆಬ್ರುವರಿ 13ರಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಜಯಂತ್ ಪಟೇಲ್ ಅವರು 2018ರ ಆಗಸ್ಟ್ 3ರಂದು ನಿವೃತ್ತಿ ಆಗಬೇಕಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics