ರಾಜ್ಯ

ವೃದ್ಧ ಮಹಿಳೆಗೆ ಚಾಕುವಿನಿಂದ ಇರಿದು ಚಿನ್ನಾಭರಣ ದರೋಡೆ

Nagaraja AB

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ದರೋಡೆ  ನಡೆದಿದೆ. ಮುಖಕ್ಕೆ ಮಾಸ್ಕ್ ಧರಿಸಿದ ದುಷ್ಕರ್ಮಿಗಳು ವಯೋವೃದ್ಧೆಯೊಬ್ಬರಿಗೆ ಚಾಕುವಿನಿಂದ ಇರಿದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ವಿಜಯನಗರ ಬಳಿಯ ಪಟ್ಟೇಗಾರಪಾಳ್ಯದಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ.

ಚೀರಾಟದ ಸದ್ದು ಕೇಳಿ ನೆರೆಹೊರೆಯವರು  ಸ್ಥಳಕ್ಕಾಗಮಿಸಿ ಬಂದು ನೋಡುವಷ್ಟರಲ್ಲಿ   ಲಕ್ಷ್ಮಿದೇವಮ್ಮ ಕುತ್ತಿಗೆ ಹಾಗೂ ಹೊಟ್ಟೆಭಾಗಕ್ಕೆ ಚಾಕುವಿನಿಂದ ಇರಿದಿದ್ದು, ರಕ್ತಸ್ರಾವವಾಗಿ ರಸ್ತೆಯಲ್ಲಿ ಬಿದ್ದಿದ್ದರು. ನಂತರ ಸಮೀಪದಲ್ಲಿನ ಆಸ್ಪತ್ರೆಗೆ ಅವರನ್ನು ಚಿಕಿತ್ಸೆಗೆ ದಾಖಲಿಸಲಾಯಿತು.

ಪಟ್ಟೇಗಾರಪಾಳ್ಯದ ನಿವಾಸಿಯಾದ 68 ವರ್ಷದ ಲಕ್ಷ್ಮಿದೇವಮ್ಮ, ಆಕೆಯ ಮೊಮ್ಮಗನೊಂದಿಗೆ ವಾಸಿಸುತ್ತಿದ್ದರು. ಅನಾರೋಗ್ಯದಿಂದಾಗಿ ಆಕೆಯ ಪತಿ ರಾಜಣ್ಣ ಕಳೆದ 8 ತಿಂಗಳ ಹಿಂದೆ ಸಾವನ್ನಪ್ಪಿದ್ದಾರೆ.

ಮೊಮ್ಮಗ ವಿಜಯಕುಮಾರ್  ಕಾಲೇಜಿಗೆ ಹೋದ ನಂತರ ಮೊದಲ ಮಹಡಿಯಲ್ಲಿ ಒಂಟಿಯಾಗಿದ್ದ ಲಕ್ಷ್ಮಿದೇವಮ್ಮ ಬಾಗಿಲು ಬಡಿದ ಸದ್ದು ಕೇಳಿ ಬಾಗಿಲು ತೆರೆದಿದ್ದಾರೆ. ಆಗ ದುಷ್ಕರ್ಮಿಗಳು ಆಕೆಯ ಮೇಲೆ ಚಾಕುವಿನಿಂದ ಇರಿದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಸಂಭವಿಸಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ.

 ಆಕೆಯ ಆರೋಗ್ಯ ಸದ್ಯ ಸುಧಾರಿಸಿದ್ದು, ಚಿಕಿತ್ಸೆ ಮುಂದುವರೆದಿದೆ. ಪೊಲೀಸರು ಹೇಳಿಕೆ ಪಡೆಯುತ್ತಿದ್ದಾರೆ. ಸಿಸಿಟಿವಿ ವಶಕ್ಕೆ ಪಡೆಯಲಾಗಿದ್ದು, ಶಂಕಿತ ದಂಪತಿಯೊಬ್ಬರನ್ನು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT