ಬೆಂಗಳೂರು: ಖಳನಟ ದಿವಂಗತ ವಜ್ರಮುನಿಯವರ ಸಂಬಂಧಿಯೊಬ್ಬರನ್ನವು ಅಪಹರಿಸಿ 1 ಕೋಟಿ ರು ಗೆ ಬೇಡಿಕೆ ಇಟ್ಟಿದ್ದ ಆರು ಮಂದಿ ತಂಡವೊಂದನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ವಜ್ರಮುನಿ ಬಾವ-ಮೈದುನ ಶಿವಕುಮಾರ್ (52) ಅವರನ್ನು ಅಪಹರಿಸಿ 1 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ,ಬಾಷ್ ಕಂಪನಿ ಉದ್ಯೋಗಿ ಹಾಗೂ ಬಿಬಿಎಂ ವಿದ್ಯಾರ್ಥಿ ಸೇರಿ ಆರು ಮಂದಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಅರೆಕೆರೆ ನಿವಾಸಿ ಸತ್ಯವೇಲಾಚಾರಿ (24), ಕೋಲಾರದ ಕಾರಂಜಿ ಕಟ್ಟೆಯ ಸಿ.ಎಸ್. ಯಶವಂತ್ ಯಾದವ್ (20), ಶ್ರೀನಿವಾಸಪುರದ ವಿನೋದ್ (20), ಸಂಜಯ್ ರೆಡ್ಡಿ (20), ಶೇಖರ್ (20) ಹಾಗೂ ಮುಳಬಾಗಿಲು ಜಗನ್ನಾಥ್ (23) ಬಂಧಿತರು. ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರು ಜಪ್ತಿ ಮಾಡಲಾಗಿದೆ.
ಸಿಂಗಸಂದ್ರದ ನಿವಾಸಿ ಶಿವಕುಮಾರ್, ವಜ್ರಮುನಿಯವರ ಪತ್ನಿಯ ತಮ್ಮ. ಬಾಷ್ ಕಂಪನಿಯಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. 2 ವರ್ಷಗಳ ಹಿಂದೆ ಅವರಿಗೆ, ಕಟ್ಟಡಗಳ ಒಳವಿನ್ಯಾಸ ಕೆಲಸ ಮಾಡುವ ಸತ್ಯವೇಲಾಚಾರಿ ಪರಿಚಯವಾಗಿತ್ತು. ಇತ್ತೀಚೆಗೆ ಮನೆಯೊಂದನ್ನು ಮಾರಾಟ ಮಾಡಿದ್ದ ಶಿವಕುಮಾರ್, ಅದರಿಂದ ಬಂದ ಹಣವನ್ನು ಬ್ಯಾಂಕ್‌ನಲ್ಲಿ ಇಟ್ಟಿದ್ದರು. ಅದನ್ನು ತಿಳಿದಿದ್ದ ಆರೋಪಿ, ತನ್ನ ಸ್ನೇಹಿತರ ಜತೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾನೆ.
ಶಿವಕುಮಾರ್ ಬಳಿ ಹಣವಿದ್ದದ್ದನ್ನು ತಿಳಿದುಕೊಂಡಿದ್ದ ಆರೋಪಿ ಸತ್ಯವೇಲಾಚಾರಿ, ‘ನಾನು ಕಷ್ಟದಲ್ಲಿದ್ದೇನೆ. ಬ್ಯಾಂಕ್‌ಗೆ ಸಾಲ ಕಟ್ಟಬೇಕಿದೆ. ಸ್ವಲ್ಪ ಹಣ ಕೊಡು. ಕೆಲ ತಿಂಗಳು ಬಿಟ್ಟು ವಾಪಸ್ ಕೊಡುತ್ತೇನೆ’ ಎಂದು ಕೇಳಿದ್ದ. ‘ಅಷ್ಟು ಹಣ ನನ್ನ ಬಳಿ ಇಲ್ಲ’ ಎಂದು ಶಿವಕುಮಾರ್ ಹೇಳಿದ್ದರಿಂದ ಸಿಟ್ಟಾಗಿದ್ದ ಆರೋಪಿ, ಸ್ನೇಹಿತರ ಜತೆ ಸೇರಿ ಸಂಚುರೂಪಿಸಿದ್ದ.
ಕೆಲಸ ಇರುವುದಾಗಿ ಹೊರ ಹೋಗಿದ್ದ ಶಿವಕುಮಾರ್ ತಡರಾತ್ರಿಯಾದರೂ ಮನೆಗೆ ಬಾರದಿದ್ದಾಗ ಶಿವಕುಮಾರ್ ಪತ್ನಿ ಸುಧಾ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸೋಮವಾರ ಬೆಳಗ್ಗೆ ಶಿವಕುಮಾರ್ ಮೊಬೈಲ್ ನಿಂದ ಕರೆ ಮಾಡಿದ್ದ ಆರೋಪಿಗಳು, ನಿಮ್ಮ ಗಂಡ ಸುರಕ್ಷಿತವಾಗಿ ಬಿಡುಗಡೆಯಾಗಬೇಕಾದರೇ 1ಕೋಟಿ ರು ಹಣ ನೀಡಬೇಕೆಂದು ಬೇಡಿಕೆಯಿಟ್ಟಿದ್ದರು.
‘ಅಪಹರಣ ಪ್ರಕರಣದ ತನಿಖೆಗೆ 6 ವಿಶೇಷ ತಂಡಗಳನ್ನು ರಚಿಸಲಾಗಿತ್ತು.. ಸಿಂಗಸಂದ್ರದಿಂದ ಆರೋಪಿಗಳು ಕಾರಿನಲ್ಲಿ ಹೊರಟಿದ್ದ ಮಾಹಿತಿಯನ್ನು ತಂಡವು ಸಂಗ್ರಹಿಸಿತ್ತು. ನಂತರ, ಕಾರು ಸಂಚರಿಸಿದ್ದ ರಸ್ತೆಗಳ ಅಕ್ಕ–ಪಕ್ಕದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿತ್ತು. ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಹೊರವಲಯದಲ್ಲಿ ಶಿವಕುಮಾರ್‌ರನ್ನು ಅಕ್ರಮ ಬಂಧನದಲ್ಲಿಟ್ಟಿದ್ದ ಜಾಗ ತಿಳಿದುಕೊಂಡ ತಂಡ, ಸ್ಥಳಕ್ಕೆ ಹೋಗಿತ್ತು. ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆಗ ಪೊಲೀಸರು, ಅವರನ್ನು ಬೆನ್ನಟ್ಟಿ ಹಿಡಿದು ಬಂಧಿಸಿದ್ದಾರೆ’ ಎಂದರು.
‘ಹೊಸ ಕಟ್ಟಡವೊಂದರ ಒಳವಿನ್ಯಾಸದ ಕೆಲಸದ ಗುತ್ತಿಗೆ ಬಗ್ಗೆ ಮಾತನಾಡುವುದಿದೆ. ನೀವು ಬನ್ನಿ’ ಎಂದು ಹೇಳಿದ್ದ ಆರೋಪಿ, ಶಿವಕುಮಾರ್‌ರನ್ನು ತಾಜ್ಮೀಲ್ ಪಾಷಾ ಎಂಬುವರ ಮನೆಗೆ ಕರೆದೊಯ್ದಿದ್ದ. ಅದೇ ಮನೆಗೆ ಬಂದಿದ್ದ ಉಳಿದ ಆರೋಪಿಗಳು, ಶಿವಕುಮಾರ್‌ನನ್ನು ಅಪಹರಿಸಿಕೊಂಡು ಹೋಗಿದ್ದರು ಎಂದರು.ಅಪಹರಣ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಆರೋಪಿಗಳು, ‘ನೀನು ಪೊಲೀಸರ ಸಹಾಯ ಪಡೆಯುತ್ತಿದೆಯಾ. ನಿನ್ನ ಗಂಡನ ಶವವನ್ನೇ ಕಳುಹಿಸಿಕೊಡುತ್ತೇವೆ’ ಎಂದು ಪತ್ನಿಗೆ ಬೆದರಿಕೆ ಹಾಕಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಮಂಗಳವಾರ ಸಂಜೆ ಆರೋಪಿಗಳನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos