ಬೆಂಗಳೂರು: ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಸುಮಾರು 6 ಲಕ್ಷ ಅಕ್ರಮ ವಲಸೆಗಾರರು ವಾಸಿಸುತ್ತಿರುವ ಬಗ್ಗೆ ವರದಿ ಬಂದಿದೆ ಎಂದು ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ. ವಿ. ಸದಾನಂದ ಗೌಡ ಹೇಳಿದ್ದಾರೆ.
ಬೆಂಗಳೂರು ನಗರ ಬಿಜೆಪಿ ಕಾರ್ಯಕಾರಿಣಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವ 2 ಲಕ್ಷ ಜನ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ. ಉಳಿದ ನಾಲ್ಕು ಲಕ್ಷ ಜನ ಚಿಕ್ಕಮಗಳೂರು, ಮಡಿಕೇರಿಯ ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ವರದಿ ಬಂದಿದೆ ಎಂದರು.
ರಾಷ್ಟ್ರ ವಿರೋಧಿ ಕೃತ್ಯದಂತಹ ಕೆಲಸಗಳಿಗೆ ಅಕ್ರಮವಾಗಿ ವಲಸೆ ಬಂದವರು ಸಹಕಾರ ನೀಡುತ್ತಿದ್ದಾರೆ. ಅಂತಹ ಜನರ ವಿರುದ್ಧ ಕೇಂದ್ರಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿನ ರಾಜಕೀಯ ಚಿತ್ರಣ ಯಾವುದೇ ಸಂದರ್ಭದಲ್ಲೂ ಬದಲಾಗಬಹುದು. ಜೆಡಿಎಸ್ -ಕಾಂಗ್ರೆಸ್ ಸರ್ಕಾರ ಯಾವ ಸಂದರ್ಭದಲ್ಲಿ ಬೇಕಾದರೂ ಬೀಳಬಹುದು. ಬಿ.ಎಸ್. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸದಾನಂದಗೌಡ ಭವಿಷ್ಯ ನುಡಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಇದೇ ತಿಂಗಳ 29 ರಂದು ನಡೆಯಲಿರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನರು ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸದಾನಂದಗೌಡ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವಿಧಾನಸಭಾ ಚುನಾವಣೆಯಲ್ಲಿ ಕೆಲ ತಪ್ಪುಗಳಿಂದ ಪಕ್ಷ ಬಹುಮತ ಗಳಿಸಲು ಸಾಧ್ಯವಾಗಲಿಲ್ಲ. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 20 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಬೇಕು, ಈ ನಿಟ್ಟಿನಲ್ಲಿ ಶ್ರಮಿಸುವ ನಗರದ ಕಾರ್ಯಕರ್ತರಿಗೆ ಮಾತ್ರ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗುವುದು ಎಂದು ಹೇಳಿದರು.