ಮಡಿಕೇರಿ: ರಾಜ್ಯದ ಕರಾವಳಿ, ಕೊಡಗು, ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ.ಸಣ್ಣ ಕೆರೆಗಳಂತಾಗಿರುವ ರಸ್ತೆಗಳಿಂದಾಗಿ ನಿವಾಸಿಗಳು ಪರದಾಡುವಂತಾಗಿದೆ.
ಮಡಿಕೇರಿ ಹೋಬಳಿಯಲ್ಲಿ 106,60 ಮಿಮಿ ಮಳೆಯಾಗಿದೆ, ಭೂಕುಸಿತದಿಂದಾಗಿ ಮಂಗಳೂರು -ಮಡಿಕೇರಿ ರಸ್ತೆಗಳು ಪರಿಸ್ಥಿತಿ ಹಾಳಾಗಿದೆ, ಸ್ಥಳಕ್ಕೆ ಧಾವಿಸಿದ ಸಂಚಾರಿ ಪೊಲೀಸರು ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ,
ಕೊಡಗಿನಲ್ಲಿ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ವ್ಯಾಪ್ತಿಯ ರಸ್ತೆಗಳು ಜಲಾವೃತಗೊಂಡಿದ್ದು, ಕಕ್ಕಬ್ಬೆ ಹೊಳೆ ಬದಿಯಲ್ಲಿ ರಾತ್ರಿ ನಿಲ್ಲಿಸಿದ್ದ ಖಾಸಗಿ ಬಸ್ಸೊಂದು ನೀರಿನಲ್ಲಿ ಮುಳುಗಿತ್ತು. ಮಡಿಕೇರಿ- ಮಂಗಳೂರು ರಸ್ತೆಯ ಒಂದು ಭಾಗ ಸುಮಾರು 300 ಅಡಿಯಷ್ಟು ಆಳಕ್ಕೆ ಕುಸಿದಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗುವ ಅಪಾಯ ಎದುರಾಗಿದೆ.
ಕರಾವಳಿಯಲ್ಲೂ ಉತ್ತಮ ಮಳೆಯಾಗುತ್ತಿದ್ದು, ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿರುವ ಹೊಸಮಠ ಮುಳುಗು ಸೇತುವೆ ಮುಳುಗಿದೆ. ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿನ ನೀರು ಅಪಾಯದ ಮಟ್ಟಕ್ಕೆ ಸನಿಹ ತಲುಪಿದ್ದು, ಸುಬ್ರಹ್ಮಣ್ಯದ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.
ಸಕಲೇಶಪುರ ತಾಲೂಕಿನ ಎಡಕುಮೇರಿ ಶಿರುವಾಗಿಲು ಸಮೀಪ 3 ಕಡೆ ಹಳಿ ಮೇಲೆ ಗುಡ್ಡ ಕುಸಿತಗೊಂಡಿದ್ದು, ಮಂಗಳೂರು-ಹಾಸನ ರೈಲು ಸಂಚಾರ ಸ್ಥಗಿತಗೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ತುಂಗಾ, ಭದ್ರಾ ಹಾಗೂ ಮಾಲತಿ ನದಿಗಳಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್ ರಾಜಾಲಖಮಗೌಡಾ ಜಲಾಶಯದಿಂದ ಬುಧವಾರ ಸಂಜೆ ಹತ್ತು ಕ್ರಸ್ಟ್‌ಗೇಟ್‌ಗಳಿಂದ 9 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ.
ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos