ಕಪಿಲಾ ನದಿಯಲ್ಲಿ ಪ್ರವಾಹ: ಮೈಸೂರು-ಊಟಿ ರಸ್ತೆ ಸಂಚಾರ ಅಸ್ತವ್ಯಸ್ಥ
ಮೈಸೂರು: ಕಬಿನಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಪಿಲಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಮೈಸೂರು-ಊಟಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ನಂಜನಗೂಡು ತಾಲೂಕಿನಲ್ಲಿರುವ ಸುತ್ತೂರು ಗ್ರಾಮದ ಸೇತುವೆ ಮುಳುಗಡೆಯಾಗಿದ್ದು ಸೇತುವೆ ಮೇಲೆ 80000 ಕ್ಯೂಸೆಕ್ಸ್ ನೀರು ಹರಿಯುತ್ತಿದೆ.
ವೈನಾಡ್ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನೀರಿನ ಹರಿವು ಅಪಾರ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದೇ ರೀತಿಯಾಗಿ ಮಳೆ ಮುಂದುವರಿದರೆ ನೀರಿನ ಹರಿವು ಇನ್ನಷ್ಟು ಹೆಚ್ಚಳವಾಗುತ್ತದೆ ಎಂದು ಅಧಿಕಾರಿಗಳು ಆತಂಕದಿಂದ ಹೇಳಿದ್ದಾರೆ. ಇದು ಮೈಸೂರು ಮತ್ತು ಊಟಿ ನಡುವೆ ಪ್ರವಾಸಿಗರನ್ನು ಮತ್ತು ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಅಡ್ಡಿಯಾಗಿದೆ.
ವೈನಾಡ್, ಕ್ಯಾಲಿಕಟ್ ಮತ್ತಿತರೆ ಸ್ಥಳಗಳಿಗೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿದೆ.
ಕಪಿಲಾ ಜಲಾನಯನ ವ್ಯಾಪ್ತಿಯಲ್ಲಿ ಬರಬಹುದಾದ ಹಳ್ಳದಕೆರೆ, ತೋಪನಕೆರೆ, ಸರಸ್ವತಿ ಕಾಲೋನಿ, ವಕ್ಕಲಗೆರೆ, ಶಂಕರಪುರ ಇನ್ನೂ ಮೊದಲಾದೆಡೆಗಳಲ್ಲಿ ಮುಳುಗಡೆಯ ಭೀತಿ ಎದುರಾಗಿದೆ.ಈ ಪ್ರದೇಶದ ಜನಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಕಪಿಲಾ ನದಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು ಇದರಿಂದ ಸುತ್ತಮುತ್ತ ಊರುಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ.
ಕಳೆದ 15 ವರ್ಷಗಳಲ್ಲಿ ಜಬಿನಿ ಜಲಾಶಯದಿಂದ ಬಿಡುಗಡೆಯಾಗುತ್ತಿರುವ ನೀರಿನ ಪ್ರಮಾಣ ಅತ್ಯಂತ ಹೆಚ್ಚಾಗಿದೆ. ಸಧ್ಯ ಜಲಾಶಯದಿಂದ 1.90 ಲಕ್ಷ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ.13 ಮನೆಗಳು ಭಾಗಶಃ ಮುಳುಗಿಸಲಾಗಿದ್ದು, ಎಚ್.ಡಿ.ಕೋಟಿ ತಾಲೂಕಿನ ಹಿನ್ನೀರಿನ ಪ್ರದೇಶಗಳಾದ ಡಿ.ಬಿ ಕುಪ್ಪೆಯು ಮುಳುಗಡೆಯಾಗಿದೆ ಎಂದು ಹೆಚ್ಚುವರಿ ಉಪ ಕಮೀಷನರ್ ಟಿ. ಯೋಗೀಶ್ ಹೇಳಿದ್ದಾರೆ.
ಕಪಿಲಾ ನದಿ ನೀರಿನ ಮಟ್ಟ ಏರುತ್ತಿದ್ದು ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಜೆಎಸ್ ಎಸ್ ನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಅಧಿಕಾರಿಗಳು ಪ್ರವಾಹ ಪರಿಸ್ಥಿತಿ ಕುರಿತು ಜನರಿಗೆ ತಿಳುವಳಿಕೆ ನೀಡಬೇಕು. ನದಿಯ ಸಮೀಪವಿರುವ ಜಾಗಗಳಲ್ಲಿ ಕೆಲಸ ಮಾಡುವಾಗ ರೈತರು ಎಚ್ಚರದಿಂದಿರಬೇಕು ಎಂದು ಅವರು ಹೇಳಿದರು.